ಅಲ್ಲಾಪೂರ (ಜೆ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಅಲ್ಲಾಪೂರ (ಜೆ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

 ಅಲ್ಲಾಪೂರ (ಜೆ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಆಳಂದ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಲಾಪೂರ (ಜೆ)ಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಆಳಂದ ತಾಲೂಕು ಅಧ್ಯಕ್ಷ ಸತೀಶ ಸನ್ಮುಖ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನು ನೆಟ್ಟು ಅದನ್ನು ದತ್ತು ಪಡೆದು ಅದರ ರಕ್ಷಣೆ ಹಾಗೂ ಪೋಷಣೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗಿಡ-ಮರಗಳು ನಮಗೆ ನೆರಳು, ಆಮ್ಲಜನಕ ಮತ್ತು ಹಣ್ಣುಗಳನ್ನು ನೀಡುವ ಮೂಲಕ ಪರಿಸರ ಸಮತೋಲನ ಕಾಪಾಡುತ್ತವೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕುಸ್ತಿಪಟು ಸಾತಲಿಂಗಪ್ಪ ಖ್ಯಾಮಗೋಳ ಮಾತನಾಡಿ, “ಹುಟ್ಟುತ್ತಲೇ ಮಗು ವಿಶ್ವಮಾನವ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲೊಂದು ವಿಶೇಷ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ಕವಿತಾ ರಾಠೋಡ, ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಂದ್ರ ಚಿಂಚೋಳಿ, ಶಾಲೆಯ ಮುಖ್ಯಗುರು ಲಕ್ಷ್ಮಣ ನಡುವಿನಕೇರಿ, ಸಹಶಿಕ್ಷಕಿ ಜಯಶ್ರೀ ಹಣಮಶೆಟ್ಟಿ, ಅತಿಥಿ ಶಿಕ್ಷಕ ವಿರೇಶ ತಳವಾರ, ಗ್ರಾಮದ ಗ್ರಾಮಸ್ಥರು, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.