ನಾಡಿನ ಸಮಗ್ರ ಕಲ್ಯಾಣಕ್ಕೆ ನೂತನ ಸಿಎಂ ಡಿಕೆಶಿ ಧ್ವನಿಯಾಗಲಿ: ಡಾ. ಪ್ರಣವಾನಂದ ಶ್ರೀ

ನಾಡಿನ ಸಮಗ್ರ ಕಲ್ಯಾಣಕ್ಕೆ ನೂತನ ಸಿಎಂ ಡಿಕೆಶಿ ಧ್ವನಿಯಾಗಲಿ: ಡಾ. ಪ್ರಣವಾನಂದ ಶ್ರೀ

*ಅತಿ ಹಿಂದುಳಿದ ಸ್ವಾಮೀಜಿಗಳ ಪ್ರಾರ್ಥನೆಗೆ ಸಿಕ್ಕ ಭಾಗ್ಯ*

ನಾಡಿನ ಸಮಗ್ರ ಕಲ್ಯಾಣಕ್ಕೆ ನೂತನ ಸಿಎಂ ಡಿಕೆಶಿ ಧ್ವನಿಯಾಗಲಿ: ಡಾ. ಪ್ರಣವಾನಂದ ಶ್ರೀ

ಕಲಬುರಗಿ : ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಪದಗ್ರಹಣ ಮಾಡಿದ ಡಿಕೆ ಶಿವಕುಮಾರ್ ನಾಡಿನ ಸಮಗ್ರ ಕಲ್ಯಾಣಕ್ಕೆ ಧ್ವನಿ ಆಗಲಿ ಮತ್ತು ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯಲ್ಲಿ ಆರು ತಿಂಗಳ ಹಿಂದೆ ಕೈಗೊಂಡ ಪ್ರಾರ್ಥನೆಗೆ ಫಲ ಸಿಕ್ಕಿದೆ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷರು ಮತ್ತು ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ. ಪ್ರಣವಾನಂದ ಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಬುಧವಾರ ನಡೆದ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಶಾಲು ಹಾಕಿ ಸತ್ಕರಿಸಿದ ನಂತರ ಮಾತನಾಡಿ ಕಳೆದ ಆರು ತಿಂಗಳ ಹಿಂದೆ ಯಾವೊಬ್ಬ ಶಾಸಕರು ಕೂಡ ಡಿಕೆಶಿ ಸಿಎಂ ಆಗಲಿ ಎಂಬ ಕೂಗನ್ನು ಎಬ್ಬಿಸದ ವೇಳೆಯಲ್ಲಿ ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯಲ್ಲಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥನೆ ಮಾಡಿ ಒತ್ತಾಯ ಹೇರಿದ ಪರಿಣಾಮವಾಗಿ ಇದೀಗ ಆ ಪ್ರಾರ್ಥನೆಗೆ ಜಯ ಸಿಕ್ಕಿದೆ ಎಂದು ಡಾ. ಪ್ರಣವಾನಂದ ಶ್ರೀಗಳು ನಂತರ ಮಾಧ್ಯಮದವರಿಗೆ ತಿಳಿಸಿದರು. 

     ನೂತನ ಮುಖ್ಯಮಂತ್ರಿಗಳು ಅತಿ ಹಿಂದುಳಿದ ಸಮುದಾಯದವರಿಗೂ ಮನ್ನಣೆ ನೀಡಿ ನಾಡಿನ ಸಮಗ್ರ ಅಭಿವೃದ್ಧಿಗೆ ನಾಯಕತ್ವ ವಹಿಸಲಿ. ಅವರ ಅವಧಿಯಲ್ಲಿ ರಾಜ್ಯವು ಎಲ್ಲಾ ರಂಗಗಳಲ್ಲಿ ಮುಂಚೂಣಿಗೆ ಬಂದು ರಾಷ್ಟ್ರದಲ್ಲೆ ಅತ್ಯಂತ ಉನ್ನತ ಸ್ಥಾನಕ್ಕೇರಲಿ ಎಂದು ಅವರು ಶುಭ ಹಾರೈಸಿದರು.

*ಸಂಪುಟ ವಿಸ್ತರಣೆಯಲ್ಲಿ ಬೇಳೂರು ಗೋಪಾಲಕೃಷ್ಣಗೆ ಸ್ಥಾನ ಸಿಗಲಿ*

 ಅತಿ ಹಿಂದುಳಿದ ಮಠಾಧೀಶರಿಗೂ ಕೂಡ ರಾಜ್ಯದಲ್ಲಿ ಸಮಾನ ಗೌರವ ನೀಡಿ ಅವರ ಅವಶ್ಯಕತೆಗಳನ್ನು ಪೂರೈಸಿ ಮುಖ್ಯ ವಾಹಿನಿಯಲ್ಲಿ ಕರೆದುಕೊಂಡು ಹೋಗುವಂತೆ ಡಿಕೆಶಿ ಪ್ರಯತ್ನಿಸಲಿ ಹಾಗೂ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕಿಂತಲೂ ಅಧಿಕ ಜನಸಮುದಾಯವನ್ನು ಹೊಂದಿರುವ ಈಡಿಗ - ಬಿಲ್ಲವ ಸೇರಿದಂತೆ 26 ಪಂಗಡಗಳ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಅವಕಾಶ ನೀಡಿ ಸಮಾಜಕ್ಕೆ ಗೌರವ ನೀಡಬೇಕಾಗಿ ಒತ್ತಾಯಿಸುತ್ತಿದ್ದೇನೆ ಎಂದು ಸ್ವಾಮೀಜಿ ತಿಳಿಸಿದರು. ಬೇಳೂರು ಗೋಪಾಲಕೃಷ್ಣ ಅವರು ಹಿರಿಯ ಶಾಸಕರಾಗಿದ್ದು ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿ ಈಡಿಗ ಸಮುದಾಯದ ಪ್ರಮುಖ ನಾಯಕರು.ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ರಾಜಕೀಯ ನಡೆಯಲ್ಲಿ ಪಕ್ಷ ನಿಷ್ಠೆಯಿಂದ ಅವರು ಮಾಡಿದ ಕೆಲಸಕ್ಕಾಗಿ ಸಂಪುಟ ವಿಸ್ತರಣೆ ವೇಳೆ ಸಚಿವರನ್ನಾಗಿಸಿ ನ್ಯಾಯ ನೀಡಬೇಕು ಎಂದು ಡಾ. ಪ್ರಣವಾನಂದ ಶ್ರೀಗಳು ಆಗ್ರಹಿಸಿದ್ದಾರೆ. 

    ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದುರ್ಗ ಛಲವಾದಿ ಮಠದ ಬಸವ ನಾಗಿ ದೇವ ಶರಣರು ಹಾಗೂ ಲಂಬಾಣಿ ಸಮುದಾಯದ ಸೇವಾಲಾಲ್ ಮಹಾರಾಜ್ ಭಾಗವಹಿಸಿ ಡಾ.ಪ್ರಣವಾನಂದ ಸ್ವಾಮೀಜಿಗಳ ಜೊತೆಗಿದ್ದು ಸನ್ಮಾನ ನೆರವೇರಿಸಿದರು ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ.