ಶಿವಲಿಂಗಪ್ಪ ಬಂಡಕ ಅವರಿಗೆ ಆತ್ಮೀಯ ಸನ್ಮಾನ, ಭಾವಪೂರ್ಣ ಬೀಳ್ಕೊಡುಗೆ
ಶಿವಲಿಂಗಪ್ಪ ಬಂಡಕ ಅವರಿಗೆ ಆತ್ಮೀಯ ಸನ್ಮಾನ, ಭಾವಪೂರ್ಣ ಬೀಳ್ಕೊಡುಗೆ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀ ಶಿವಲಿಂಗಪ್ಪ ಎಸ್. ಬಂಡಕ ಅವರಿಗೆ ಕಾಲೇಜು ವತಿಯಿಂದ ಆತ್ಮೀಯ ಸನ್ಮಾನ ಹಾಗೂ ಭಾವಪೂರ್ಣ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಬಳಿಕ ವೇದಿಕೆಯಲ್ಲಿದ್ದ ಅತಿಥಿಗಳನ್ನು ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಲಾಯಿತು. ನಂತರ ಸೇವಾ ನಿವೃತ್ತಿ ಹೊಂದಿದ ಶಿವಲಿಂಗಪ್ಪ ಎಸ್. ಬಂಡಕ ಹಾಗೂ ಅವರ ಧರ್ಮಪತ್ನಿಯನ್ನು ಶಾಲು ಹೊದಿಸಿ, ಹೂವಿನ ಮಾಲೆ ಹಾಗೂ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಬಂಡಕ ಅವರು ತಮ್ಮ ಸೇವಾ ಅವಧಿಯಲ್ಲಿ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಿದರು. ಅವರ ಸರಳತೆ, ಕರ್ತವ್ಯನಿಷ್ಠೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ಮೆಚ್ಚಿ, ನಿವೃತ್ತಿ ಜೀವನವು ಸುಖಕರ ಹಾಗೂ ಸಂತೋಷಮಯವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಂಡಕ ಅವರ ಗೆಳೆಯರು, ಸಂಬಂಧಿಕರು, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಅನೇಕ ಗಣ್ಯರು ಭಾಗವಹಿಸಿ ಸನ್ಮಾನಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ದಿಲೀಪ್ ರಾಂಪೂರೆ, ಡಾ. ಮಹಾದೇವಪ್ಪ ರಾಂಪೂರೆ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಬಬಲೇಶ್ವರ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಸಂಗಮೇಶ ಎಸ್. ನೀಲಾ, ಮಾಜಿ ಪ್ರಾಂಶುಪಾಲ ಜಯರಾಜ ಪಾಟೀಲ ಓಕಳಿ, ಎನ್.ಜಿ. ಪಾಟೀಲ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಮಿತ್ರರು ಹಾಗೂ ಬಂಧುಬಳಗದವರು ಉಪಸ್ಥಿತರಿದ್ದರು.
ಸೇವಾ ಜೀವನದಲ್ಲಿ ಸಲ್ಲಿಸಿದ ಅಮೂಲ್ಯ ಕೊಡುಗೆಗಾಗಿ ಶಿವಲಿಂಗಪ್ಪ ಎಸ್. ಬಂಡಕ ಅವರನ್ನು ಗೌರವಿಸಿ ಬೀಳ್ಕೊಟ್ಟ ಈ ಕಾರ್ಯಕ್ರಮವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
