ಅರಬ್ಬರ ನಾಡಿನಿಂದ ತಾಯ್ನಾಡಿನ ಸೊಗಡು: ಸಾಹಿತಿ ಪಿ.ಎಸ್. ರಂಗನಾಥ್ ಅವರ "ರಾಂಪುರ ನಮ್ಮೂರು ರಾಂಪುರ" ಗೀತೆ

ಅರಬ್ಬರ ನಾಡಿನಿಂದ ತಾಯ್ನಾಡಿನ ಸೊಗಡು: ಸಾಹಿತಿ ಪಿ.ಎಸ್. ರಂಗನಾಥ್ ಅವರ "ರಾಂಪುರ ನಮ್ಮೂರು ರಾಂಪುರ" ಗೀತೆ

ಅರಬ್ಬರ ನಾಡಿನಿಂದ ತಾಯ್ನಾಡಿನ ಸೊಗಡು: ಸಾಹಿತಿ ಪಿ.ಎಸ್. ರಂಗನಾಥ್ ಅವರ "ರಾಂಪುರ ನಮ್ಮೂರು ರಾಂಪುರ" ಗೀತೆ

*ರಾಂಪುರ*: ಬದುಕಿನ ಬಂಡಿ ಕಟ್ಟಲು ಸಾವಿರಾರು ಮೈಲಿ ದೂರದ ಅರಬ್ಬರ ನಾಡಿಗೆ ಹೋದರೂ, ಹುಟ್ಟಿದ ಮಣ್ಣಿನ ಮೇಲಿನ ಮಮಕಾರ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಮಸ್ಕತ್‌ನಲ್ಲಿ ನೆಲೆಸಿರುವ ಕನ್ನಡಿಗ ಸಾಹಿತಿ ಪಿ.ಎಸ್. ರಂಗನಾಥ್ ಅವರೇ ಸಾಕ್ಷಿ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದವರಾದ ಇವರು ಬರೆದ "ರಾಂಪುರ ನಮ್ಮೂರು ರಾಂಪುರ" ಎಂಬ ಗೀತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಜನರ ಮನ ಗೆಲ್ಲುತ್ತಿದೆ.

ಈ ಹಾಡು ರಾಂಪುರದ ಇತಿಹಾಸ ಮತ್ತು ಸಂಸ್ಕೃತಿಯ ಅನಾವರಣ. ಸೀತಾ ಮಾತೆಯನ್ನು ಹುಡುಕುತ್ತಾ ಶ್ರೀರಾಮ ಬಂದಿದ್ದ ಪವಿತ್ರ ಮಣ್ಣು, ಜಟಂಗಿರಾಮನ ಬೆಟ್ಟ ಹಾಗೂ ಮೌರ್ಯ ಸಾಮ್ರಾಟ ಅಶೋಕನ ಕಾಲದ ಶಿಲಾಶಾಸನಗಳ ಇತಿಹಾಸವನ್ನು ಲೇಖಕರು ಹಾಡಿನಲ್ಲಿ ಸ್ಮರಿಸಿದ್ದಾರೆ. ಒಮ್ಮೆ ಎಲೆ ರಾಂಪುರವೆಂದೂ, ಮತ್ತೊಮ್ಮೆ ತನ್ನ ರುಚಿಕರ ಬದನೆಕಾಯಿಯಿಂದಲೂ ಹೆಸರಾಗಿದ್ದ ಊರಿನ ಕೀರ್ತಿಯನ್ನು ಹಾಡಿನ ಸಾಲುಗಳು ಮೆಲುಕು ಹಾಕುತ್ತವೆ. ಹಳ್ಳಿಯ ಬಿಸಿಲಲ್ಲೂ ತಂಗಾಳಿಯಂತಹ ಗುಣ ಹೊಂದಿರುವ ರಾಂಪುರದ ಜನತೆ ಹಾಗೂ ದೇವಸ್ಥಾನಗಳಂತಿರುವ ಶಾಲೆಗಳ ಬಗ್ಗೆ ರಂಗನಾಥ್ ಅವರು ತುಂಬು ಹೃದಯದಿಂದ ಬರೆದಿದ್ದಾರೆ. ತನ್ನ ಹುಟ್ಟೂರಿನ ಹಿರಿಯರನ್ನು ಮತ್ತು ದಾರಿ ತೋರಿದ ಗುರುಗಳನ್ನು ಸ್ಮರಿಸುವ "ರಾಂಪುರ ನಮ್ಮೂರು ರಾಂಪುರ" ಗೀತೆ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ಅನಿವಾಸಿ ಕನ್ನಡಿಗರ ತಾಯ್ನಾಡಿನ ಪ್ರೇಮಕ್ಕೆ ಈ ಹಾಡು ಕೈಗನ್ನಡಿಯಾಗಿದೆ.

*ವೃತ್ತಿಯಲ್ಲಿ ಅಭಿಯಂತರ, ಪ್ರವೃತ್ತಿಯಲ್ಲಿ ಸಾಹಿತಿ:*

ಪಿ.ಎಸ್. ರಂಗನಾಥ್ ಅವರು ಕಳೆದ 16 ವರ್ಷಗಳಿಂದ ಒಮಾನ್‌ನ ಮಸ್ಕತ್‌ನಲ್ಲಿ ವಿದ್ಯುತ್ ನಿಯಂತ್ರಕ ಉಪಕರಣಗಳ ತಯಾರಿಕಾ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಾಹಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ದುಬೈ ಮತ್ತು ಕುವೈತ್‌ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 

ವೃತ್ತಿಯಲ್ಲಿ ಅಭಿಯಂತರರಾದರೂ ಇವರೊಬ್ಬ ಹವ್ಯಾಸಿ ಬರಹಗಾರರು. ಇವರು ಬರೆದ ಹಲವಾರು ಕಥೆಗಳು, ಕವನಗಳು, ವಿಷಯಾಧರಿತ ಲೇಖನಗಳು ಮತ್ತು ಪ್ರವಾಸಿ ಲೇಖನಗಳು ವಿವಿಧ ದಿನಪತ್ರಿಕೆ, ಮಾಸ ಪತ್ರಿಕೆ ಮತ್ತು ಆನ್ ಲೈವ್ ವೆಬ್ ತಾಣಗಳಲ್ಲಿ ಪ್ರಕಟ ಗೊಂಡಿವೆ.

*ಹೊರನಾಡಿನಲ್ಲಿ ಕನ್ನಡ ಕಂಪು:*

ಕೇವಲ ಬರಹಕ್ಕೆ ಸೀಮಿತವಾಗದ ರಂಗನಾಥ್ ಅವರು, ಗಲ್ಫ್ ರಾಷ್ಟ್ರಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

*ಪ್ರಮುಖ ಕೃತಿಗಳು:* ಒಮಾನ್ ಕನ್ನಡಿಗರ ಅನುಭವಗಳನ್ನೊಳಗೊಂಡ *ಅರಬ್ಬರ ನಾಡಿನಲ್ಲಿ ಕನ್ನಡಿಗರು*' ಪುಸ್ತಕ ಹಾಗೂ ಅದರ ಇಂಗ್ಲಿಷ್ ಆವೃತ್ತಿ *ಬಿಯಾಂಡ್ ದ ಹೊರೈಜನ್*' (Beyond the Horizon) ಮತ್ತು *ಸಿಂಚನ*'ಕಥಾಸಂಕಲನ ಇವರ ಸಾಹಿತ್ಯ ಬದ್ಧತೆಗೆ ಸಾಕ್ಷಿ.

*ಸಂಘಟನೆ ಮತ್ತು ಸೇವೆ:* ಕಳೆದ ಎರಡು ದಶಕಗಳ ಸಮಯವನ್ನು ಕೊಲ್ಲಿ ರಾಷ್ಟ್ರಗಳಲ್ಲಿ ಕಳೆದಿರುವ ಶ್ರೀಯುತರು ಪ್ರಸ್ತುತ ಗಲ್ಫ್ ಕನ್ನಡಿಗರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಜತೆಗೆ ವಿವಿಧ ಸಂಘಟನೆಗಳ ಮುಖಾಂತರ ಸಾಮಾಜಿಕ ಸೇವೆಯನ್ನು ಸಲ್ಲಿಸುತಿದ್ದಾರೆ. ಈ ಹಿಂದೆ ಒಂದು ಬಾರಿ ಒಮಾನ್ ರಾಷ್ಟ್ರದ ಭಾರತೀಯ ಸಾಮಾಜಿಕ ವೇದಿಕೆಯ ಕರ್ನಾಟಕ ವಿಭಾಗದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.