ನಿಖಿಲ್ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸಲಿ: ಮಹೇಶ ವಟವಟಿಕರ್
ನಿಖಿಲ್ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸಲಿ: ಮಹೇಶ ವಟವಟಿಕರ್
ಕಲಬುರಗಿ : ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುವಾಗ ಜಾ.ದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ವಹಿಸಬೇಕು. ಹಿರಿಯ ಹಾಗೂ ಅನುಭವಿ ನಾಯಕರನ್ನು ಟೀಕಿಸುವುದರಿಂದ ಮಾತ್ರ ದೊಡ್ಡ ನಾಯಕನಾಗಲು ಸಾಧ್ಯವಿಲ್ಲ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಚಿಂಚೋಳಿ-ಕಾಳಗಿ ತಾಲೂಕು ಅಧ್ಯಕ್ಷ ಮಹೇಶ ಡಿ. ವಟವಟಿಕರ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸತತ ಮೂರು ಚುನಾವಣೆಗಳಲ್ಲಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಇನ್ನೂ ಅನುಭವ ಗಳಿಸಬೇಕಿದೆ. ಹಿರಿಯ ನಾಯಕರ ಬಗ್ಗೆ ಮಾತನಾಡುವಾಗ ರಾಜಕೀಯ ಪ್ರಬುದ್ಧತೆ ಮತ್ತು ಯೋಗ್ಯತೆ ಅಗತ್ಯವಾಗಿದ್ದು, ಅನಗತ್ಯ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಹಲವು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಶಾಸಕರು, ಸಚಿವರು ಹಾಗೂ ಉಪ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಅನುಭವ ಮತ್ತು ನಾಯಕತ್ವಕ್ಕೆ ಗೌರವ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಾಮರ್ಥ್ಯವನ್ನು ಜನರ ಮುಂದೆ ಸಾಬೀತುಪಡಿಸುವತ್ತ ಗಮನ ಹರಿಸಬೇಕು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪುತ್ರ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ಅವರ ಮೊಮ್ಮಗ ಎಂಬ ಗುರುತಿಗಿಂತ ಸ್ವಂತ ರಾಜಕೀಯ ಸಾಧನೆ ಮುಖ್ಯವಾಗಿದೆ ಎಂದು ಮಹೇಶ ವಟವಟಿಕರ್ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಯಶಸ್ವಿ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಅವರ ನಾಯಕತ್ವವೂ ಪ್ರಮುಖ ಕಾರಣವಾಗಿದೆ. ಗೃಹಲಕ್ಷ್ಮಿ ಯೋಜನೆಯಂತಹ ಜನಪರ ಯೋಜನೆಗಳು ಲಕ್ಷಾಂತರ ಮಹಿಳೆಯರ ಬದುಕಿಗೆ ಆಸರೆಯಾಗಿವೆ ಎಂದು ಅವರು ತಿಳಿಸಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಡಿ.ಕೆ. ಶಿವಕುಮಾರ್ ವಿರುದ್ಧ ಮಾಡುತ್ತಿರುವ ಟೀಕೆಗಳು ರಾಜಕೀಯ ಪ್ರೇರಿತವಾಗಿದ್ದು, ತಮ್ಮ ನಡೆ-ನುಡಿ ಮತ್ತು ಭಾಷೆಯನ್ನು ಮರುಪರಿಶೀಲಿಸಬೇಕು ಎಂದು ಮಹೇಶ ಡಿ. ವಟವಟಿಕರ್ ಆಗ್ರಹಿಸಿದರು.
