ಜಾತಿ ಆದಾಯ ಪ್ರಮಾಣಪತ್ರಕ್ಕಾಗಿ ಮಧ್ಯರಾತ್ರಿ 3 ಗಂಟೆಗೆ ಕ್ಯೂ

ಜಾತಿ ಆದಾಯ ಪ್ರಮಾಣಪತ್ರಕ್ಕಾಗಿ ಮಧ್ಯರಾತ್ರಿ 3 ಗಂಟೆಗೆ ಕ್ಯೂ

ಜಾತಿ ಆದಾಯ ಪ್ರಮಾಣಪತ್ರಕ್ಕಾಗಿ ಮಧ್ಯರಾತ್ರಿ 3 ಗಂಟೆಗೆ ಕ್ಯೂ ಹೊಲೂರು ನಾಡಕಚೇರಿ ಮುಂದೆ ಸಾರ್ವಜನಿಕರ ಅಹೋರಾತ್ರಿ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ರೋಣ ( ಹೊಳೆಆಲೂರು ): ತಾಲೂಕಿನ ಹೊಳೆಆಲೂರು ಹೋಬಳಿ ನಾಡಕಚೇರಿಯಲ್ಲಿರುವ ನೆಮ್ಮದಿ ಕೇಂದ್ರವು ಸಾರ್ವಜನಿಕರಿಗೆ ನೆಮ್ಮದಿ ನೀಡುವ ಬದಲು ನಿರಂತರ ತೊಂದರೆ ಹಾಗೂ ಮಾನಸಿಕ ಕಿರಿಕಿರಿ ಉಂಟುಮಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವಿವಿಧ ಸೌಲಭ್ಯಗಳು ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ತುರ್ತು ಕೆಲಸಗಳಿಗೆ ಅತ್ಯಗತ್ಯವಾಗಿರುವ ಜಾತಿ ಆದಾಯ ಹಾಗೂ ಇತರೆ ಸರ್ಕಾರಿ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಮಧ್ಯರಾತ್ರಿ 3:00 ಹಾಗೂ 4:00 ಗಂಟೆಗೆ ಬಂದು ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ.

 ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ

ಪ್ರಸ್ತುತ ಹೊಳಲೂರು ನಾಡಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕೇವಲ ಒಂದೇ ಒಂದು ಕಂಪ್ಯೂಟರ್ ಹಾಗೂ ಸಿಂಗಲ್ ಕೌಂಟರ್ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ದೂರದ ಹಳ್ಳಿಗಳಿಂದ ಬರುವ ವೃದ್ಧರು ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ನಿದ್ದೆ ಗೆಟ್ಟು ಮುಂಜಾನೆಯೇ ಬಂದು ಪಾಳೆ ಹಚ್ಚಿ ಕಾಯುತ್ತಿದ್ದಾರೆ. ಆದರೂ ದಿನವಿಡೀ ಕ್ಯೂ ನಿಂತರೂ ಕೆಲಸವಾಗದೆ ಬರಿಗೈಲಿ ಮನೆಗೆ ಮರಳುವಂತಾಗಿದೆ. ಕಚೇರಿ ಆವರಣದಲ್ಲಿ ಸರಿಯಾದ ಆಸನ ಹಾಗೂ ನೆರಳಿನ ವ್ಯವಸ್ಥೆಯೂ ಇಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಳ್ಳುತ್ತಿದ್ದರೆ ಸಾರ್ವಜನಿಕರು ಮಾತ್ರ ಬೀದಿಯಲ್ಲಿ ನಿಲ್ಲುವಂತಾಗಿದೆ.

ಹೊಳಆಲೂರು ಹೋಬಳಿ ವ್ಯಾಪ್ತಿಗೆ ಬರುವ ಸಂಧಿವಾಡ ಹೊನ್ನಾಪುರ ಮಲ್ಲಾಪುರ ಬೆಳವಣಿಕೆ ಹಡಗಲಿ ಕೌಜಿಗೇರಿ ಅಸುಟಿ ಮಾವಿನಾ ಮೇಘುಲಾಪುರ ಸೇರಿದಂತೆ ಹತ್ತಾರು ಹಳ್ಳಿಗಳ ಸಾರ್ವಜನಿಕರು ಪ್ರತಿದಿನ ಈ ಕಚೇರಿಯನ್ನು ನಂಬಿಕೊಂಡಿದ್ದಾರೆ.

 ಕೌಂಟರ್‌ಗಳ ಕೊರತೆಯಿಂದಾಗಿ ಇಡೀ ಹೋಬಳಿಯ ಜನತೆ ಕಚೇರಿಗೆ ಅಲೆಯುವಂತಾಗಿದೆ.

ಸಂಬಂಧಪಟ್ಟ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹೊಳಲೂರು ನಾಡಕಚೇರಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚುವರಿಯಾಗಿ ಎರಡು ನೆಮ್ಮದಿ ಕೇಂದ್ರದ ಕಂಪ್ಯೂಟರ್ ಕೌಂಟರ್‌ಗಳನ್ನು ತೆರೆಯಬೇಕು ಹಾಗೂ ನುರಿತ ಆಪರೇಟರ್‌ಗಳನ್ನು ನಿಯೋಜಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಒಂದು ವೇಳೆ ಸಾರ್ವಜನಿಕರ ಈ ನ್ಯಾಯಯುತ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನಾಡಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕರು ತೀವ್ರ ಎಚ್ಚರಿಕೆ ನೀಡಿದ್ದಾರೆ.