ನೈಜ ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ವಿಳಂಬ: ತಪ್ಪಿತಸ್ಥ ತಹಸೀಲ್ದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ನೈಜ ತಳವಾರರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡಲು ವಿಳಂಬ: ತಪ್ಪಿತಸ್ಥ ತಹಸೀಲ್ದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ : ನೈಜ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ವಿಳಂಬ ಮಾಡುತ್ತಿರುವ ಹಾಗೂ ಅನಗತ್ಯ ಕಾರಣಗಳನ್ನು ನೀಡಿ ಅರ್ಜಿಗಳನ್ನು ತಿರಸ್ಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ತಳವಾರ ಮಹಾಸಭಾ (ರಿ.) ಕಲಬುರಗಿ ಜಿಲ್ಲಾ ಘಟಕವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾಂತ ದಶರಥ ತಳವಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ, ರಾಜ್ಯ ಸರ್ಕಾರವು 2025ರ ಫೆಬ್ರವರಿ 7ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ ನಾಯಕಡ, ನಾಯಕ ಹಾಗೂ ತಳವಾರ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣ ಪತ್ರ ವಿತರಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರೂ, ಕಲಬುರಗಿ ಜಿಲ್ಲೆಯ ಹಲವೆಡೆ ಅಧಿಕಾರಿಗಳು ಸುತ್ತೋಲೆಯನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಸಮುದಾಯದ ಸದಸ್ಯರು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದರೂ ಅನಗತ್ಯ ದಾಖಲೆಗಳ ಬೇಡಿಕೆ, ಸುತ್ತೋಲೆಯ ತಪ್ಪು ವ್ಯಾಖ್ಯಾನ ಹಾಗೂ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ ಪ್ರಮಾಣ ಪತ್ರ ನೀಡುವುದನ್ನು ವಿಳಂಬಗೊಳಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಹಾಸಭೆ ತಿಳಿಸಿದೆ.
ಶಾಲೆ-ಕಾಲೇಜು ಪ್ರವೇಶ, ಸ್ಪರ್ಧಾತ್ಮಕ ಪರೀಕ್ಷೆಗಳು, ನೇಮಕಾತಿಗಳು, ವಿದ್ಯಾರ್ಥಿವೇತನಗಳು ಹಾಗೂ ಇತರೆ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ತಳವಾರ ಸಮುದಾಯದ ಜನರು ಸಂಕಷ್ಟ ಎದುರಿಸುತ್ತಿದ್ದು, ನೈಜ ಅರ್ಹರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಜಾತಿ ಪ್ರಮಾಣ ಪತ್ರ ನೀಡದೆ ವಿಳಂಬ ಮಾಡುವ ಅಥವಾ ವಿನಾಕಾರಣ ತಿರಸ್ಕರಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು. ಅಗತ್ಯವಿದ್ದಲ್ಲಿ ಕಾನೂನುಬದ್ಧ ಕ್ರಮ ಕೈಗೊಂಡು ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ತಳವಾರ ಸಮುದಾಯದ ಜನರಿಗೆ ಸಂವಿಧಾನ ಹಾಗೂ ಕಾನೂನಿನಡಿ ದೊರೆಯಬೇಕಾದ ಹಕ್ಕುಗಳನ್ನು ಖಚಿತಪಡಿಸಿ, ಎಸ್‌ಟಿ ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಮಹಾಸಭೆ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ದೇವರಿಗೆ ತಾಲೂಕ ಅಧ್ಯಕ್ಷ ಗಿರೀಶ್ ತಂಬಿಗಿ ಇದ್ದರು.
