ತಳವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡಲು ಆಗ್ರಹ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂತೋಷ್ ತಳವಾರ್ ಮನವಿ

ತಳವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡಲು ಆಗ್ರಹ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂತೋಷ್ ತಳವಾರ್  ಮನವಿ

ತಳವಾರ ಸಮುದಾಯಕ್ಕೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡಲು ಆಗ್ರಹ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಂತೋಷ್ ತಳವಾರ್ ಮನವಿ

ಕಲಬುರಗಿ : ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ತಳವಾರ ಸಮುದಾಯದ ಅರ್ಹ ಜನರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರಗಳನ್ನು ತಕ್ಷಣ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ ಅವರು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ, ಕೇಂದ್ರ ಸರ್ಕಾರವು 2020ರ ಮಾರ್ಚ್ 20ರಂದು ಹೊರಡಿಸಿದ ರಾಜ್ಯಪತ್ರ (ಗೆಜೆಟ್) ಹಾಗೂ ಕರ್ನಾಟಕ ಸರ್ಕಾರದ 2020ರ ಮೇ 28ರ ಅಧಿಸೂಚನೆಯ ಮೂಲಕ “Naikada/Nayak (including Parivar and Talawar)” ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದರ ಅನ್ವಯ ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಪ್ರವರ್ಗ–1ರಲ್ಲಿದ್ದ ತಳವಾರ ಜಾತಿಯನ್ನು 2022ರ ಅಕ್ಟೋಬರ್ 29ರಂದು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಳವಾರ ಸಮುದಾಯದ ಜನರಿಗೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡುವಲ್ಲಿ ಅನಗತ್ಯ ವಿಳಂಬ ಹಾಗೂ ಗೊಂದಲ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ತಳವಾರ ಸಮುದಾಯವನ್ನು ಕೋಲಿ, ಕಬ್ಬಲಿಗ, ಅಂಬಿಗ, ಬೇಸ್ತ, ಗಂಗಾಮತ ಹಾಗೂ ಮಿನುಗಾರ ಸೇರಿದಂತೆ ಇತರ ಜಾತಿಗಳೊಂದಿಗೆ ಸಂಪರ್ಕ ಕಲ್ಪಿಸುವ ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿದ್ದರೂ, ಅಧಿಕಾರಿಗಳು ಈ ಆಧಾರದ ಮೇಲೆ ಪ್ರಮಾಣಪತ್ರ ವಿತರಣೆಯನ್ನು ತಡೆಹಿಡಿದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ತಳವಾರ ಸಮುದಾಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ, ಅರ್ಜಿದಾರರ ದಾಖಲೆಗಳು ಹಾಗೂ ಪಂಚನಾಮೆ ವರದಿಗಳ ಆಧಾರದ ಮೇಲೆ ಜಾತಿ ಪ್ರಮಾಣಪತ್ರಗಳನ್ನು ನೀಡುವುದನ್ನು ತಡೆಯುವ ಯಾವುದೇ ಆದೇಶ ನ್ಯಾಯಾಲಯದಿಂದ ಹೊರಬಂದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಎರಡು ವರ್ಷಗಳಿಂದ ತಳವಾರ ಸಮುದಾಯದ ಜನರಿಗೆ ಎಸ್‌ಟಿ ಪ್ರಮಾಣಪತ್ರ ನೀಡದೇ ಇರುವುದರಿಂದ ಅವರಿಗೆ ಶಿಕ್ಷಣ, ಉದ್ಯೋಗ ಹಾಗೂ ಇತರ ಸಾಂವಿಧಾನಿಕ ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ತಳವಾರ ಜಾತಿಯ ಕುರಿತು ರಾಜ್ಯ ಸರ್ಕಾರವು ಸ್ಪಷ್ಟ ನಿಲುವು ಪ್ರಕಟಿಸಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ತಳವಾರ ಜಾತಿ ಇನ್ನೂ ಅಸ್ತಿತ್ವದಲ್ಲಿದೆಯೇ ಎಂಬುದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ತಳವಾರ ಸಮುದಾಯದ ಅರ್ಜಿದಾರರ ದಾಖಲೆಗಳಲ್ಲಿ ಜಾತಿ “ತಳವಾರ” ಎಂದು ನಮೂದಾಗಿದ್ದು, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರ ವರದಿಯಲ್ಲಿಯೂ ದೃಢೀಕರಣ ಇದ್ದಲ್ಲಿ ಅವರಿಗೆ ತಕ್ಷಣ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.

ತಳವಾರ ಸಮುದಾಯದ ಜನರಿಗೆ ನ್ಯಾಯ ಒದಗಿಸಿ, ಸಂವಿಧಾನಬದ್ಧ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಂತೋಷ ತಳವಾರ ಒತ್ತಾಯಿಸಿದ್ದಾರೆ.