ಕನ್ನಡ-ರೈತಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಲು ; ಆನಂದ ಎಸ್ ದೊಡ್ಡಮನಿ ಆಗ್ರಹ

ಕನ್ನಡ-ರೈತಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಲು ; ಆನಂದ ಎಸ್ ದೊಡ್ಡಮನಿ ಆಗ್ರಹ

ಕನ್ನಡ-ರೈತಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಲು ; ಆನಂದ ಎಸ್ ದೊಡ್ಡಮನಿ ಆಗ್ರಹ

ಕಲಬುರಗಿ: ನೆಲ, ಜಲ, ಭಾಷೆ ಹಾಗೂ ರೈತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕನ್ನಡಪರ ಮತ್ತು ರೈತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಮೇಲಿನ ಎಲ್ಲಾ ಪೊಲೀಸ್ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಬೇಷರತ್ತಾಗಿ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಲಬುರಗಿ ಜಿಲ್ಲಾಧ್ಯಕ್ಷ ಆನಂದ ಎಸ್ ದೊಡ್ಡಮನಿ ಆಗ್ರಹಿಸಿದ್ದಾರೆ.

 ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೋರಾಟಗಾರರು ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲದೆ ಕನ್ನಡ ನಾಡಿನ ಅಸ್ಮಿತೆ, ಗಡಿ ರಕ್ಷಣೆ, ಮಹದಾಯಿ ಹಾಗೂ ಕಾವೇರಿ ನೀರಿನ ಹಂಚಿಕೆ, ರೈತರ ಸಾಲಮನ್ನಾ ಮತ್ತು ಬೆಂಬಲ ಬೆಲೆ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ನಡೆದಿರುವ ಇಂತಹ ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ದಾಖಲಾಗಿರುವ ಪ್ರಕರಣಗಳನ್ನು ಸರ್ಕಾರ ರದ್ದುಗೊಳಿಸುವುದು ತನ್ನ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕರವೇ ಪ್ರಮುಖವಾಗಿ ಶಾಂತಿಯುತ ಪ್ರತಿಭಟನೆಗಳ ವೇಳೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಗಳಿಗೆ ಅಲೆದಾಡುವ ಪರಿಸ್ಥಿತಿಯಿಂದ ಹೋರಾಟಗಾರರು ಮತ್ತು ಅವರ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಇದಕ್ಕೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದೆ.

ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದ ಸ್ಥಳೀಯ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಆದ್ಯತೆಯ ಮೇರೆಗೆ ವಜಾಗೊಳಿಸಬೇಕೆಂದು ಕರವೇ ಆಗ್ರಹಿಸಿದೆ.

"ನಾಡು-ನುಡಿಯ ರಕ್ಷಣೆಗಾಗಿ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು. ನ್ಯಾಯಸಮ್ಮತ ಹೋರಾಟಗಾರರನ್ನು ಅಪರಾಧಿಗಳಂತೆ ನೋಡುವುದು ಸರಿಯಲ್ಲ. ಸರ್ಕಾರ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು" ಎಂದು ಜಿಲ್ಲಾಧ್ಯಕ್ಷ ಆನಂದ ಎಸ್ ದೊಡ್ಡಮನಿ ಎಚ್ಚರಿಸಿದ್ದಾರೆ.

ಈ ವಿಷಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಉಸ್ತುವಾರಿ ಸಚಿವರು ವಿಶೇಷ ಆಸಕ್ತಿ ವಹಿಸಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹೋರಾಟಗಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಒತ್ತಾಯಿಸಿದೆ.