ಚಾರಿತ್ರಿಕ ದಾಖಲೆಯಿಂದ ಸಾಂಸ್ಕೃತಿಕ ಹರಿವು: ದಿಂಗಾಲೇಶ್ವರ ಶ್ರೀ
ಗುರುಪಾದಲಿಂಗ ಮಹಾಶಿವಯೋಗಿ ಅನುಷ್ಠಾನ ಮುಕ್ತಾಯ ಸಮಾರಂಭ: ಪುಸ್ತಕ ಲೋಕಾರ್ಪಣೆ
ಚಾರಿತ್ರಿಕ ದಾಖಲೆಯಿಂದ ಸಾಂಸ್ಕೃತಿಕ ಹರಿವು: ದಿಂಗಾಲೇಶ್ವರ ಶ್ರೀ
ಕಮಲಾಪುರ: ಮಠಾಧೀಶರು, ಮಹಾತ್ಮರು ಜೀವನ, ಧಾರ್ಮಿಕ, ಆಧ್ಯಾತ್ಮಿಕ ಸಾಧನೆ, ಲೋಕಕಲ್ಯಾಣಾರ್ಥವಾಗಿ ಕೈಗೊಂಡ ಕಾರ್ಯಗಳು ನಮ್ಮ ಸಂಸ್ಕೃತಿಯ ಭಾಗಗಳಾಗಿದ್ದು ಈ ಸಂಸ್ಕೃತಿ ಹರಿವಿಗೆ ಚಾರಿತ್ರಿಕ ದಾಖಲೆಗಳು ಅಗತ್ಯ ಎಂದು ಧಾರವಾಡ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಮುತ್ಯಾನ ಬಬಲಾದನಲ್ಲಿ ಬುಧವಾರ ಆಯೋಜಿಸಿದ್ದ ಗುರುಪಾದಲಿಂಗ ಮಹಾ ಶಿವಯೋಗಿಗಳ 48 ದಿನಗಳ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಸಾಹಿತಿ, ಡಾ. ಶರಣಬಸಪ್ಪ ವಡ್ಡನಕೇರಿ ಅವರು ರಚಿಸಿದ 'ಗುರುಪಾದಲಿಂಗ ಶ್ರೀಗಳ ಭಜನಾ ಪದಗಳು' ಹಾಗೂ 'ಕೃಷಿಋಷಿ' ಗುರುಪಾದಲಿಂಗ ಮಹಾಶಿವಯೋಗಿಗಳ ಚರಿತ್ರೆ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪೂರ್ವಜರಿಂದ ವಂಶಸ್ಥರಿಗೆ ಮೌಲ್ಯಗಳು, ಸಂಪ್ರದಾಯಗಳು, ಭಾಷೆ, ಕಲಾ ಪ್ರಕಾರಗಳ ನಿರಂತರ ಪ್ರಸರಣವನ್ನು ಸೂಚಿಸುತ್ತದೆ. ಭಜನಾ ಪದಗಳು ಶ್ರೇಷ್ಠ ಕಲಾ ಪ್ರಕಾರ. ಇವು ದಾಖಲಾದರೆ ಸಮುದಾಯದ ಪರಂಪರೆ ಜೀವಂತವಾಗಿ ಮತ್ತು ಪ್ರಸ್ತುತವಾಗಿ ಉಳಿಯುತ್ತದೆ.
ಗುರುಪಾದಲಿಂಗರ ಆಧ್ಯಾತ್ಮ, ಕಾಯಕದಲ್ಲಿನ ಮೌನ ಸಾಧನೆ ಮುಂದಿನ ಪೀಳಿಗೆಗೆ ಧಿಕ್ಸೂಚಿಯಾಗಬೇಕು. ಈ ಸಾಂಸ್ಕೃತಿಕ ಪರಂಪರೆ ಭೂತಕಾಲವನ್ನು ಭವಿಷ್ಯಕ್ಕೆ ಸಂಪರ್ಕಿಸುವ ಅದೃಶ್ಯ ದಾರದಂತೆ ಕಾರ್ಯನಿರ್ವಹಿಸುತ್ತದೆ. ಇದು ಮೌಖಿಕ ಸಂಪ್ರದಾಯಗಳು, ಜಾನಪದ ಕಲೆಗಳು, ಆಚರಣೆಗಳು ಮತ್ತು ಐತಿಹಾಸಿಕ ಜ್ಞಾನವನ್ನು ಒಳಗೊಂಡಿದೆ. ಅದು ಕಾಲಾನಂತರದಲ್ಲಿ ಸಮಾಜದ ಗುರುತನ್ನು ರೂಪಿಸುತ್ತದೆ ಎಂದರು.
ರಾಜಶೇಖರ ಶಿವಾಚಾರ್ಯ, ಶಿವಲಿಂಗ ಮಹಾಸ್ವಾಮೀಜಿ, ಅಭಿನವ ಚೆನ್ನಬಸವ ಸ್ವಾಮೀಜಿ, ಮಲ್ಲಿನಾಥ ಮಹಾರಾಜ, ಶಿವಪ್ರಸಾದ ದೇವರು, ಶಾಸಕ ಬಸವರಾಜ ಮತ್ತಿಮಡು, ಜಯಶ್ರೀ ಮತ್ತಿಮಡು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಟಗಿ, ಮಲ್ಲಿಕಾರ್ಜುನ ಮರತೂ, ಸಾಹಿತಿ ಶರಣಬಸಪ್ಪ ವಡ್ಡನಕೇರಿ, ಗುರುಪಾದಪ್ಪ ಮಾಟೂರ, ರಾಜು, ಕಪನೂರ, ತಾಜೋದ್ದೀನ ಪಟೇಲ,ಬಸವರಾಜ ಮಠಪತಿ, ಶಿವರಾಜ ಬೊಮ್ಮಣ, ಚೆನ್ನು ಸ್ವಾಮಿ ಮತ್ತಿತರರು ಹಾಜರಿದ್ದರು.ಶಿಕ್ಷಕ ಅಂಬಾರಾಯ ಮಡ್ಡೆ ನಿರೂಪಿಸಿದರು.
ಬಬಲಾದ ಗುರುಪಾದಲಿಂಗ ಶ್ರೀ ಕಾಯಕ, ದಾಸೋಹ, ಆಧ್ಯಾತ್ಮ ಸಂಗಮವಾಗಿದೆ. ಇತ್ತೀಚೆಗೆ ಶಾಲೆ ಸಹ ತೆರೆದಿದ್ದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದಾರೆ. ನಮ್ಮ ಭಾಗದ ಶ್ರೀಮಂತ ಸಂಸ್ಕೃತಿ ಸಾರುವ ಶ್ರೇಷ್ಠ ಧಾರ್ಮಿಕ ಕೇಂದ್ರ ಈ ಬಬಲಾದಿ ಮಠ
ಬಸವರಾಜ ಮತ್ತಿಮಡು ಶಾಸಕ
