ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಗೆ ಬೆಂಬಲ ಪತ್ರ : ಪ್ರಣವಾನಂದ ಶ್ರೀ
ಅತಿ ಹಿಂದುಳಿದ ಸ್ವಾಮೀಜಿಗಳ ನಡೆ, ಧರ್ಮಸ್ಥಳ ಕಡೆ
ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಗೆ ಬೆಂಬಲ ಪತ್ರ : ಪ್ರಣವಾನಂದ ಶ್ರೀ
ಕಲಬುರಗಿ : ರಾಜ್ಯದ ಹಿಂದುಳಿದ ಮಠಾಧೀಶರ ತಂಡವು ಜುಲೈ ಹತ್ತರಂದು ಶುಕ್ರವಾರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸುವ ಪತ್ರ ನೀಡಲಾಗುವುದು ಎಂದು ರಾಜ್ಯ ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಜೂನ್ 27 ಮತ್ತು 28 ರಂದು ನಡೆದ ರಾಜ್ಯದ ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಧರ್ಮಸ್ಥಳ ಕ್ಷೇತ್ರ ಪ್ರವಾಸ ಕೈಗೊಳ್ಳಲಾಗುತ್ತಿದೆ. ಅದರ ಮೂಲಕ ಸನಾತನ ಧರ್ಮವನ್ನು ಉಳಿಸಬೇಕು.ಶುಕ್ರವಾರ ಬೆಳಗ್ಗೆ 10:30ಕ್ಕೆ ರಾಜ್ಯದ ವಿವಿಧ ಸಮುದಾಯಗಳ ಸುಮಾರು ಎಂಟು ಹತ್ತು ಸ್ವಾಮೀಜಿಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಚರ್ಚಿಸಿ ಬೆಂಬಲ ಪತ್ರ ಹಸ್ತಾಂತರಿಸಲಾಗುವುದು ಎಂದರು.
ಭಾರತದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಕಳಂಕ ಹಚ್ಚಲು ಯತ್ನಿಸಲಾಗುತ್ತಿದೆ ಸನಾತನ ಧರ್ಮವನ್ನು ನಿಂದಿಸಿ ನಾಶಗೊಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ರಾಜ್ಯದ ಅತಿ ಹಿಂದುಳಿದ ಮಠಾಧೀಶರು ಒಗ್ಗಟ್ಟಿನಿಂದ ದನಿಗೂಡಿಸಲು ಅತಿ ಹಿಂದುಳಿದ ಸ್ವಾಮೀಜಿಗಳ ನಡೆ ಧರ್ಮಸ್ಥಳ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
