ಸಚಿವ ತಂಗಡಗಿ ಮನೆ ಮುಂದೆ ಈಡಿಗ ಬಿಲ್ಲವರ ಧರಣಿ ಸತ್ಯಾಗ್ರಹ ಕೈಬಿಟ್ಟ ಸ್ವಾಮೀಜಿ ನಿರ್ಧಾರಕ್ಕೆ ಸ್ವಾಗತ

ಸಚಿವ ತಂಗಡಗಿ ಮನೆ ಮುಂದೆ ಈಡಿಗ ಬಿಲ್ಲವರ ಧರಣಿ ಸತ್ಯಾಗ್ರಹ ಕೈಬಿಟ್ಟ ಸ್ವಾಮೀಜಿ ನಿರ್ಧಾರಕ್ಕೆ ಸ್ವಾಗತ

ಸಚಿವ ತಂಗಡಗಿ ಮನೆ ಮುಂದೆ ಈಡಿಗ ಬಿಲ್ಲವರ ಧರಣಿ ಸತ್ಯಾಗ್ರಹ ಕೈಬಿಟ್ಟ ಸ್ವಾಮೀಜಿ ನಿರ್ಧಾರಕ್ಕೆ ಸ್ವಾಗತ

ಕಲಬುರಗಿ : ರಾಜ್ಯದ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾದ ಶಿವರಾಜ ತಂಗಡಗಿ ಅವರ ಕಾರಟಗಿಯಲ್ಲಿರುವ ಮನೆಯ ಮುಂದೆ ಏ.6 ರಂದು ಡಾ. ಪ್ರಣವಾ ಶ್ರೀಗಳ ನೇತೃತ್ವದಲ್ಲಿ ನಡೆಸಲುದ್ದೇಶಿಸಿದ ಧರಣಿ ಸತ್ಯಾಗ್ರಹವನ್ನು ಕೈ ಬಿಟ್ಟಿರುವುದು ಸ್ವಾಗತಾರ್ಹ ನಿಲುವು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತಿಳಿಸಿದೆ. 

     ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕು ಕರದಾಳ್ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ವತಿಯಿಂದ ನಡೆದ 42 ದಿನಗಳ 700 ಕಿಲೋಮೀಟರ್ ಪಾದಯಾತ್ರೆ ಸಮಾರೋಪ ಸಮಾರಂಭ ಫೆಬ್ರವರಿ 12ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆದಾಗ ಸಚಿವ ಶಿವರಾಜ ತಂಗಡಗಿಯವರು ಧರಣಿ ಸ್ಥಳಕ್ಕೆ ಬಂದು ನೀಡಿದ ಭರವಸೆಯನ್ನು ಈಡೇರಿಸದ ಕಾರಣದಿಂದ ಮಾತಿಗೆ ತಪ್ಪಿದ ಸಚಿವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಘೋಷಿಸಲಾಗಿತ್ತು. ಆದರೆ ಸಚಿವ ತಂಗಡಗಿಯವರು ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿರುವ ಈ ಸಂದರ್ಭದಲ್ಲಿ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳು ಮಾನವೀಯತೆಯ ದೃಷ್ಟಿಯಿಂದ ಮುಷ್ಕರ ನಡೆಸದಿರಲು ತೀರ್ಮಾನಿಸಿದೆ. ಈ ಬಗ್ಗೆ ಡಾ. ಪ್ರಣವಾನಂದ ಸ್ವಾಮೀಜಿಯವರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು ಮಾತ್ರವಲ್ಲದೆ ಸಚಿವ ತಂಗಡಗಿಯವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಆಶೀರ್ವದಿಸಿರುವುದನ್ನು ಹೋರಾಟ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸಿದೆ ಎಂದು ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೇಚೂರ್ ತಿಳಿಸಿದ್ದಾರೆ. 

    ಸಚಿವರ ಮನೆಮುತ್ತಿಗೆ ಹಾಗೂ ಧರಣಿ ಸತ್ಯಾಗ್ರಹದ ಕುರಿತಾಗಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜದ ಹಿರಿಯ ಮುಖಂಡರಾದ ಮಾಜಿ ಸಚಿವ ಮಾಲೀಕಯ್ಯ ವಿ ಗುತ್ತೇದಾರ್ ಮತ್ತು ಎಚ್ ಆರ್ ಶ್ರೀನಾಥ್ ಧಣಿಗಳ ಮನವಿ ಮೇರೆಗೆ ಸ್ವಾಮೀಜಿಯವರನ್ನು ಮನವೊಲಿಸಿ, ಮಾನವಿಯತೆಯ ದೃಷ್ಟಿಯಿಂದ ಮುಷ್ಕರ ಕೈಬಿಡುವಂತೆ ಕೇಳಿಕೊಂಡ ಪರಿಣಾಮವಾಗಿ ಉದ್ದೇಶಿತ ಮುಷ್ಕರವನ್ನು ಸ್ವಾಮೀಜಿ ಅವರು ಕೈ ಬಿಟ್ಟಿದ್ದಾರೆ ಎಂದು ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.