ಎಂ.ಜಿ. ರಸ್ತೆ ಕಾಮಗಾರಿಯಲ್ಲಿ ಕಳಪೆ ಆರೋಪ: ಗುತ್ತಿಗೆದಾರರ

ಎಂ.ಜಿ. ರಸ್ತೆ ಕಾಮಗಾರಿಯಲ್ಲಿ ಕಳಪೆ ಆರೋಪ: ಗುತ್ತಿಗೆದಾರರ

ಎಂ.ಜಿ. ರಸ್ತೆ ಕಾಮಗಾರಿಯಲ್ಲಿ ಕಳಪೆ ಆರೋಪ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಆಗ್ರಹ

ಕಲಬುರಗಿ: ನಗರದ ಎಂ.ಜಿ. ರಸ್ತೆಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯು ಕಳಪೆ ಮಟ್ಟದಿಂದ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸಚೀನ್ ಎಸ್. ಪರತಾಬಾದ ಅವರು ಸಲ್ಲಿಸಿದ ಮನವಿಯಲ್ಲಿ, ಕಾಮಗಾರಿಯನ್ನು ಎಸ್ಟಿಮೇಟ್ ಪ್ರಕಾರ ಮಾಡದೇ ಮನಬಂದಂತೆ ನಿರ್ವಹಿಸಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ಡಾಂಬರೀಕರಣ ರಸ್ತೆ ಗುಣಮಟ್ಟದಿಂದ ನಿರ್ಮಾಣವಾಗಿಲ್ಲದೇ ಇರುವುದರಿಂದ ಕೆಲವೇ ದಿನಗಳಲ್ಲಿ ರಸ್ತೆ ಹದಗೆಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದಲ್ಲದೆ ರಸ್ತೆ ಮೇಲಿನ ಮಳೆ ನೀರು ಸರಿಯಾಗಿ ಹರಿದುಹೋಗುವಂತೆ ನಾಲೆ ವ್ಯವಸ್ಥೆ ಮಾಡಬೇಕಾಗಿದ್ದರೂ, ನಾಲೆಗಳು ರಸ್ತೆಗಿಂತ ಎತ್ತರದಲ್ಲಿ ನಿರ್ಮಾಣವಾಗಿರುವುದರಿಂದ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆಯೇ ನಿಂತು ರಸ್ತೆ ಮತ್ತಷ್ಟು ಹಾನಿಗೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಸಂಬಂಧಪಟ್ಟ ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ, ಕಾಮಗಾರಿಯನ್ನು ಮರುಪರಿಶೀಲನೆ ಮಾಡಿ ಹೊಸ ಗುತ್ತಿಗೆದಾರರಿಗೆ ನೀಡಬೇಕು. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ವೇದಿಕೆ ಆಗ್ರಹಿಸಿದೆ.

ಒಂದು ವೇಳೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸದಿದ್ದರೆ ಎಂ.ಜಿ. ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಅಣವೀರ ಪಾಟೀಲ, ಶಿವಕುಮಾರ ಯಾದವ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ ಹಾಗೂ ಶ್ರೀಮಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.