ಭಕ್ತಿ–ಜ್ಞಾನ–ಜೀವನಮೌಲ್ಯಗಳ ಸಂಗಮ: “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ಮುರಳಿ ಕಾಕೋಳು ಅಭಿಮತ
ಭಕ್ತಿ–ಜ್ಞಾನ–ಜೀವನಮೌಲ್ಯಗಳ ಸಂಗಮ: “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ಮುರಳಿ ಕಾಕೋಳು ಅಭಿಮತ
ಶ್ರೀಮದ್ಭಾಗವತದ ತತ್ತ್ವಗಳ ಮೂಲಕ ಭಕ್ತಿ, ಜ್ಞಾನ ಹಾಗೂ ಜೀವನಮೌಲ್ಯಗಳನ್ನು ಸರಳ ಕನ್ನಡದಲ್ಲಿ ಪರಿಚಯಿಸುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ “ಆತ್ಮೋದ್ಧಾರಕ್ಕೆ ಅಮೃತ ಮಾರ್ಗ ಭಾಗವತ” ನೂತನ ಕೃತಿಯನ್ನು ಕಾಕೋಳು ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟೀ ಮತ್ತು ಪಾಂಚಜನ್ಯ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟೀ ಮುರಳಿ ಕಾಕೋಳು ಬಿಡುಗಡೆಗೊಳಿಸಿ ಮಾತನಾಡುತ್ತಾ ಪರಾಭವ ಸಂವತ್ಸರದ ಅಧಿಕ ಜ್ಯೇಷ್ಠ – ಪುರುಷೋತ್ತಮ ಮಾಸದಲ್ಲಿ ಭಾಗವತದಂತಹ ಆಧ್ಯಾತ್ಮಿಕ ಗ್ರಂಥಗಳನ್ನು “ಗ್ರಂಥ ತಾಂಬೂಲ” ರೂಪದಲ್ಲಿ ವಿತರಿಸುವುದು ಪರಮ ಪುಣ್ಯಕರ ಕಾರ್ಯವೆಂದು ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು. ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ ಅರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಕಾರ್ಯ ನಿರ್ವಹಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಆಧ್ಯಾತ್ಮಿಕ ಉಪಕ್ರಮವಾಗಿ ಈ ಕೃತಿಯ ಪ್ರಕಟಣೆಗೆ ಪ್ರಣವ ಮೀಡಿಯಾ ಹೌಸ್ ಪ್ರಕಾಶನಕ್ಕೆ ಸಹಯೋಗ ನೀಡಲಾಗಿದೆ “ಜ್ಞಾನ ದಾನವೇ ಶ್ರೇಷ್ಠ ದಾನ” ಎಂಬ ಶಾಶ್ವತ ಸಂದೇಶವನ್ನು ಈ ಕೃತಿ ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃತಿ ಪರಿಚಯ ಮಾಡಿದ ಕೆ .ರಾಘವೇಂದ್ರ ಭಾಗವತದ ತತ್ವಗಳು ಇಂದಿನ ಜೀವನಕ್ಕೆ ದಾರಿದೀಪವಾಗಿದ್ದು, ಆಧ್ಯಾತ್ಮಿಕ ಚಿಂತನೆಗೆ ಹೊಸ ಆಯಾಮ ನೀಡುತ್ತವೆ .ಈ ಕೃತಿ ಭಕ್ತಿ, ಸಂಸ್ಕಾರ ಮತ್ತು ಜೀವನಮೌಲ್ಯಗಳನ್ನು ಮನಮುಟ್ಟುವ ಶೈಲಿಯಲ್ಲಿ ಪರಿಚಯಿಸುತ್ತದೆ .ಶ್ರೀಮದ್ಭಾಗವತದ ಆಧ್ಯಾತ್ಮಿಕ ಸಾರವನ್ನು ಜೀವನಸ್ಪರ್ಶಿಯಾಗಿ ನಿರೂಪಿಸಿರುವ ಲೇಖಕರು, ಭಕ್ತಿ ಕೇವಲ ಆಚರಣೆಗಷ್ಟೇ ಸೀಮಿತವಲ್ಲ; ಅದು ಬದುಕನ್ನು ಪರಿವರ್ತಿಸುವ ಆಂತರಿಕ ಶಕ್ತಿಯಾಗಿದೆ ಎಂಬುದನ್ನು ವಿವಿಧ ಲೇಖನಗಳ ಮೂಲಕ ಪರಿಣಾಮಕಾರಿಯಾಗಿ ಮನದಟ್ಟುಗೊಳಿಸಿದ್ದಾರೆ ಎಂದು ತಿಳಿಸಿದರು .
ವಿಶೇಷ ಆಹ್ವಾನಿತರಾಗಿದ್ದ ಎಸ್ .ಆರ್ .ವಿಜಯಕುಮಾರ್ ಈ ಕೃತಿಯು ಭಕ್ತಿ, ಜ್ಞಾನ ಮತ್ತು ಜೀವನಸಾರ್ಥಕತೆಯ ಅನ್ವೇಷಣೆಗೆ ಓದುಗರನ್ನು ಆಹ್ವಾನಿಸುವ ಮನನಾತ್ಮಕ ಕೃತಿಯಾಗಿ ಮೂಡಿಬಂದಿದೆ ಎಂದು ತಿಳಿಸಿದರು .
