ಮಾಡಬೂಳದಲ್ಲಿ ₹35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

ಮಾಡಬೂಳದಲ್ಲಿ ₹35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

 ಮಾಡಬೂಳದಲ್ಲಿ ₹35 ಕೋಟಿ ವೆಚ್ಚದ ನೂತನ ಮೃಗಾಲಯ ಲೋಕಾರ್ಪಣೆ

ಕಲಬುರಗಿ, ಮೇ 18: ಬಿಸಿಲಿನ ಝಳಕ್ಕೆ ಕೆಂಡಂತಾಗಿದ್ದ, ಬರಡು ಮತ್ತು ನಿರುಪಯುಕ್ತವೆನಿಸಿದ್ದ ಭೂಭಾಗವೇ ಇಂದು ಹಸಿರು ಹೊದಿಕೆ ತೊಟ್ಟು ವನ್ಯಜೀವಿಗಳ ನಂದನವನವಾಗಿ ರೂಪಾಂತರಗೊಂಡಿದೆ. ಕಲಬುರಗಿ ಜಿಲ್ಲೆಯ ಮಾಡಬೂಳ ಗ್ರಾಮದಲ್ಲಿ ಸುಮಾರು 43 ಎಕರೆ ಪ್ರದೇಶದಲ್ಲಿ ಅಂದಾಜು ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮೃಗಾಲಯವನ್ನು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಲೋಕಾರ್ಪಣೆ ಮಾಡಿದರು.

ಉದ್ಘಾಟನಾ ಸಂದರ್ಭದಲ್ಲಿ  ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ ಹಾಗೂ ಸ್ಥಳೀಯ ಶಾಸಕರು ಉಪಸ್ಥಿತರಿದ್ದರು. 

ಕೆಲವು ವರ್ಷಗಳ ಹಿಂದೆ ಬರಿದಾಗಿದ್ದ ಈ ಪ್ರದೇಶದಲ್ಲಿ ಇಂದು ನವಿಲುಗಳ ನೃತ್ಯ, ಸಿಂಹ-ಹುಲಿಗಳ ಘರ್ಜನೆ, ಹತ್ತಾರು ವೈವಿಧ್ಯಮಯ ಪಕ್ಷಿಗಳ ಕಲರವ, ಬಬೂನ್, ಲಂಗೂರು ಸೇರಿದಂತೆ ಹಲವು ಪ್ರಾಣಿ-ಪಕ್ಷಿಗಳ ಸಂಚಾರ ಕಣ್ತುಂಬಿಕೊಳ್ಳಬಹುದಾಗಿದೆ. ಮಾಡಬೂಳ ಮೃಗಾಲಯವು ಒಟ್ಟು 56 ಜಾತಿಯ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ಕಲ್ಪಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಪ್ರೇಕ್ಷಣೀಯ ತಾಣವಾಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.

ಈ ಮೃಗಾಲಯದ ಮೂಲಕ ಈ ಭಾಗದ ಜನರು, ವಿಶೇಷವಾಗಿ ಮಕ್ಕಳು, ವನ್ಯಜೀವಿಗಳನ್ನು ಸಮೀಪದಿಂದ ವೀಕ್ಷಿಸುವುದರ ಜೊತೆಗೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ತಮ್ಮ ಜಿಲ್ಲೆಯಲ್ಲಿಯೇ ಪಡೆಯಲಿದ್ದಾರೆ. ಇದುವರೆಗೆ ದೂರದ ಊರುಗಳ ಮೃಗಾಲಯಗಳಿಗೆ ತೆರಳಬೇಕಾಗಿದ್ದ ಅಗತ್ಯ ಇಲ್ಲದಂತಾಗಿದೆ. ಶಿಕ್ಷಣ ಮತ್ತು ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಕೇಂದ್ರವಾಗಿ ಇದು ಬೆಳೆಯಲಿದೆ.

ಮೃಗಾಲಯದಲ್ಲಿ ಸಮಗ್ರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಕಲ್ಲಿನ ಗೋಡೆ ಕಾಂಪೌಂಡ್, 20 ಮೀಟರ್ ಅಗಲದ ಪ್ರವೇಶ ರಸ್ತೆ, ಭವ್ಯ ಪ್ರವೇಶ ದ್ವಾರ, ವಾಹನ ನಿಲುಗಡೆ ವ್ಯವಸ್ಥೆ, ನೀರು ಹಾಗೂ ವಿದ್ಯುತ್ ಸೌಲಭ್ಯ, ಪ್ರಾಣಿಗಳ ಆಸ್ಪತ್ರೆ, ಅಡುಗೆಮನೆ, ಶವ ಪರೀಕ್ಷಾ ಕೊಠಡಿ, ಕ್ವಾರಂಟೈನ್ ವಿಭಾಗ ಹಾಗೂ ಆಡಳಿತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ ಹಾಗೂ ಕುಳಿತುಕೊಳ್ಳುವ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.

ಮಾಡಬೂಳ ಮೃಗಾಲಯವು ಕೇವಲ ವನ್ಯಜೀವಿ ಸಂರಕ್ಷಣಾ ಕೇಂದ್ರವಲ್ಲ, ಕಲಬುರಗಿಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಆಕರ್ಷಕ ತಾಣವಾಗಿದ್ದು, ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಲಿದೆ. ಬರಡಿನಿಂದ ಹಸಿರಿನತ್ತ ನಡೆದ ಈ ಪರಿವರ್ತನೆ, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಸಮನ್ವಯದ ಮಾದರಿಯಾಗಿ ಗುರುತಿಸಿಕೊಂಡಿದೆ.