ಸಂವಿಧಾನಕ್ಕೆ ಧಕ್ಕೆ ತರುವವರ ವಿರುದ್ಧ ಜನರೇ ತಕ್ಕ ಉತ್ತರ ನೀಡುತ್ತಾರೆ: ಶಾಸಕ ಜಿ.ಎಸ್. ಪಾಟೀಲ
ಶಾಸಕ. ಜಿ. ಎಸ್. ಪಾಟೀಲ ಅವರಿಗೆ ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ
ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜಯಂತ್ಯೋತ್ಸವ
ಸಂಘಟನಾ ಚತುರ ಮೈಲಾರಪ್ಪ ಚಳ್ಳಮರದಗೆ ಉನ್ನತ ಸ್ಥಾನಗಳ ಭರವಸೆ ; ಕಾರ್ಯಕ್ರಮ ನೋಡಲು ಹರಿದು ಬಂದ ಜನಸಾಗರ
ಕಲ್ಯಾಣ ಕಹಳೆ ನರೇಗಲ್: ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳು ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅಪಾಯಕಾರಿ ಆಗುತ್ತವೆ. ಯಾರು ಸಂವಿಧಾನದ ತಂಟೆಗೆ ಬರುತ್ತಾರೋ ಅವರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ರೋಣ ಶಾಸಕ ಜಿ. ಎಸ್. ಪಾಟೀಲ ಹೇಳಿದರು.
ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅಭಿಮಾನಿ ಬಳಗ ಮತ್ತುಜಿ. ಎಸ್. ಪಾಟೀಲ ಅವರ ಅಭಿಮಾನಿ ಬಳಗದ ವತಿಯಿಂದ ನರೇಗಲ್ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತ್ಯೋತ್ಸವ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ದಲಿತರು, ಹಿಂದುಳಿದವರು ಎನ್ನುವ ಬದಲು ನಾವು ಸಮಾನರು ಎನ್ನಬೇಕು. ಈ ಹಿಂದೆ ಬ್ರಿಟಿಷರ ಕಾಲದಲ್ಲಿ, ಗೌಡಕಿ ಆಡಲಿತದಲ್ಲಿದ್ದ ತಾರತಮ್ಯ ಈಗ ಇಲ್ಲ ಡಾ. ಬಾಬಾ ಸಹೇಬರು ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನತೆಯಿಂದ, ಸಹಬಾಳ್ವೆಯಿಂದ ಬದುಕಬಹುದಾಗಿದೆ ಎಂದರು. ದೇಶದ ಸಂವಿಧಾನ ಬದಲಿಸುವ ಕುರಿತು ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾವು 70 ವರ್ಷಗಳಿಂದ ಸಂವಿಧಾನವನ್ನು ಕಾಪಾಡಿಕೊಂಡು ಬಂದು ಅದರ ಆಶಯದಂತೆ ಬದುಕಿದ್ದೇವೆ. ಮುಂದಿನ ಪೀಳಿಗೆಯೂ ಸಹ ಸಂವಿಧಾನವನ್ನು ಕಾಪಾಡುವ ಮತ್ತು ಕರ್ತವ್ಯಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊರಬೇಕಿದೆ. ಅದೇ ಕಾರಣಕ್ಕಾಗಿ ಇಂದಿನ ಕಾರ್ಯಕ್ರಮದ ದೀಪ ಬೆಳಗುವಿಕೆ ಹಾಗೂ ಉದ್ಘಾಟನೆಯನ್ನು ಯುವ ನಾಯಕರುಗಳಿಂದ ಮಾಡಿಸಿರುವೆ ಎಂದು ಹೇಳಿದರು.
ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಹಾಗೂ ಗಜೇಂದ್ರಗಡ ತಾಲ್ಲೂಕು ಘಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮೈಲಾರಪ್ಪ ವೀ. ಚಳ್ಳಮರದ ಅವರ ಸಂಘಟನಾ ಶಕ್ತಿ ಉತ್ತಮವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಅತ್ಯದ್ಭುತವಾದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ಮೈಲಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಬಂದ ನಂತರ ಮೂರ್ತಿಯಾಗಿ ಪರಿವರ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಎಂದು ಭರವಸೆ ನೀಡಿದರು.
ರೋಣ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ್ ಜಿ. ಪಾಟೀಲ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಸಮಾನತೆಯಿಂದ ಬದುಕು ನೀಡಿದ್ದಾರೆ ಅದಕ್ಕಾಗಿ ಸಂವಿಧಾನ ಉಳಿಸಲು ಮುಂದಾಗಬೇಕು. ಬಹಳಷ್ಟು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಿ ಸಾಮಾಜಿಕ ಸಾಮರಸ್ಯ ಹಾಗೂ ಸಮಾಜ ಸುಧಾರಣೆಗಾಗಿ ಹೋರಾಡಿದ ಮಹಾನ್ ದಾರ್ಶನಿಕರಾದ ಡಾ. ಬಾಬು ಜಗಜೀವನ್ ರಾಮ್ ಅವರ ಸಾಧನೆ, ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ ಐ. ಪಾಟೀಲ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುನ್ನತವಾಗಿದೆ. ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು ಎಂದರು. ಭಾರತೀಯ ಕೃಷಿಯ ಆಧುನೀಕರಣಕ್ಕೆ ಕೊಡುಗೆ ನೀಡಿದ ಡಾ. ಬಾಬು ಜಗಜೀವನರಾಮ್‌ರವರ ಪ್ರಯತ್ನದ ಹಸಿರು ಕ್ರಾಂತಿಯಿಂದಾಗಿ ದೇಶದಲ್ಲಿ ಆಹಾರ ಕೊರತೆ ದೂರವಾಯಿತು ಎಂದರು.
ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಪ್ರತಿಯೊಬ್ಬ ಭಾರತೀಯನಲ್ಲೂ ಈ ಸಹೋದರತ್ವದ ಭಾವನೆ ಇರಬೇಕು ಹಾಗೂ ಜಾತಿ, ಧರ್ಮ ಅಥವಾ ಭಾಷೆಯ ಭೇದವಿಲ್ಲದೆ ಎಲ್ಲರನ್ನೂ ಒಂದೇ ಕುಟುಂಬದವರೆಂದು ಭಾವಿಸುವ ಮತ್ತು ಪರಸ್ಪರ ಗೌರವ, ಪ್ರೀತಿ ಹಾಗೂ ಸಾಮರಸ್ಯದಿಂದ ಬದುಕುವ ಮಾನವೀಯ ಮೌಲ್ಯಗಳನ್ನು ಸಂವಿಧಾನವು ಒತ್ತಿಹೇಳುತ್ತದೆ ಎಂದರು.
ಬಾಗಲಕೋಟೆ ಯುವ ಮುಖಂಡ ವಿನಯ ಆರ್. ತಿಮ್ಮಾಪುರ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿ, ಸಮಾನತೆ ಮತ್ತು ಕಲ್ಯಾಣಕ್ಕಾಗಿ ಶ್ರಮಿಸಲು ಸಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಆಯೋಜಕ ಮೈಲಾರಪ್ಪ ವೀ. ಚಳ್ಳಮರದ ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಣ ಬೂದಿಶ್ವರಮಠದ ಡಾ. ವಿಶ್ವನಾಥ ಮಹಾಸ್ವಾಮಿಗಳು, ನರೇಗಲ್ಲನ ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ ಶ್ಯಾವಲಿ ಶರಣರು, ಇಟಗಿಯ ಶಿವಶರಣ ಗೆದಿಗೆಪ್ಪಜ್ಜನವರು, ಸೂಡಿ ಮರುಳು ಶಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾದಿಗ ಸಮುದಾಯದವರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು.
ನರೇಗಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಂದಾಜು ಐದು ಸಾವಿರದಷ್ಟು ಜನರು ಸೇರಿದ್ದರು. ನಂತರ ಸಾಂಸ್ಕೃತಿ ಹಾಗೂ ರಜಮಂಜರಿ ಕಾರ್ಯಕ್ರಮಗಳು ನಡೆದವು.
ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ ಅವರು ದಲಿತರ ಅಭಿವೃದ್ದಿಗೆ ಶ್ರಮಿಸಿದ್ದಕ್ಕಾಗಿ, ಕ್ಷೇತ್ರದ ಯುವಕರಿಗೆ ಉದ್ಯೋಗದ ವ್ಯವಸ್ಥೆ ಮಾಡಿಸಿದ್ದಕ್ಕಾಗಿ, ನೆಲ, ಜಲ ಸಂರಕ್ಷಣೆಗೆ ಮಿಡಿಯುತ್ತಿರುವ ಕಾರಣಕ್ಕಾಗಿ ಹಾಗೂ ಏಳು ದಶಕದಿಂದ ಕ್ಷೇತ್ರದ ಜನರೊಂದಿಗೆ ಬೆರೆತಿದ್ದಕ್ಕಾಗಿ ಸಂಘಟನೆಯವರು ಜೈ ಭೀಮ್ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಂತರ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಬೈಲಪ್ಪ ತಳವಾರ, ಬಿ. ವಿ. ಗೌಡರ, ಅರುಣ ಕುಲಕರ್ಣಿ, ವಿ. ಎ. ಕುಂಬಾರ, ಈಶಯ್ಯ ಕಲ್ಲೂರ, ಹನಮಪ್ಪ ಅಬ್ಬಿಗೆರಿ, ಸುರೇಶ ಹಳ್ಳಿಕೇರಿ ಹಾಗೂ ಚಂದ್ರು ಎಂ. ರಾಥೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ವೇಳೆ ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ವಿಜಯ ಕಲ್ಮನಿ, ಶರಣಪ್ಪ ಬೆಟಗೇರಿ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಗುಡದಪ್ಪ ಗೋಡಿ, ಎ. ಸಿ. ಪಾಟೀಲ, ಯುಸೂಫ್ ಇಟಗಿ, ಎಂ. ಎಸ್. ಧಡೇಸೂರಮಠ, ಮುತ್ತಪ್ಪ ನೂಲ್ಕಿ, ಹನಮಂತಪ್ಪ ದ್ವಾಸಲ, ಸದ್ದಾಂ ನಶೇಖಾನ, ಇತರರು ಇದ್ದರು.
*ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*
