ಭರತನಾಟ್ಯದ ರಂಗಕ್ಕೆ ಹೊಸ ಕಿರಣ: ಶ್ರಾವಣಿ ಪ್ರಕಾಶ ಪ್ರವೇಶ
ಭರತನಾಟ್ಯದ ರಂಗಕ್ಕೆ ಹೊಸ ಕಿರಣ: ಶ್ರಾವಣಿ ಪ್ರಕಾಶ ಪ್ರವೇಶ
ನಗರದ ಪ್ರತಿಭಾವಂತ ಯುವ ನೃತ್ಯಾಂಗನೆ ಕುಮಾರಿ ಶ್ರಾವಣಿ ಪ್ರಕಾಶ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಅವರ ನೃತ್ಯಯಾತ್ರೆಯ ಮಹತ್ವದ ಘಟ್ಟವಾಗಿ ಮೂಡಿಬರುತ್ತಿದೆ. ಹಲವು ವರ್ಷಗಳ ನಿರಂತರ ಅಭ್ಯಾಸ, ಶ್ರದ್ಧೆ ಮತ್ತು ಪರಿಶ್ರಮದ ಫಲವಾಗಿ ಈ ವೇದಿಕೆ ಪ್ರವೇಶ ಸಿದ್ಧಗೊಂಡಿದೆ.
ಬಾಲ್ಯದಿಂದಲೇ ನೃತ್ಯಸಾಧನೆಯಲ್ಲಿ ತೊಡಗಿಕೊಂಡಿರುವ ಶ್ರಾವಣಿ, ಇಂಜಿನಿಯರಿಂಗ್ ಹಾಗೂ ವಿನ್ಯಾಸ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ, ಶಿಕ್ಷಣ ಮತ್ತು ಕಲೆಯ ನಡುವೆ ಸಮತೋಲನ ಸಾಧಿಸಿರುವುದು ವಿಶೇಷ. ಅವರ ಈ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ.
ಈ ರಂಗಪ್ರವೇಶಕ್ಕೆ ಮಾರ್ಗದರ್ಶನ ನೀಡಿರುವ ಕಲಾನಿಧಿ ಸ್ಕೂಲ್ ಆಫ್ ಡಾನ್ಸ್‌ನ ವಿದುಷಿ ವೀಣಾ ನಿಧಿರವರು, ಶ್ರಾವಣಿಯ ಶಿಸ್ತಿನ ಅಭ್ಯಾಸ, ನೃತ್ಯಪಟುತ್ವ ಮತ್ತು ಕಲಾನಿಷ್ಠೆಯನ್ನು ಪ್ರಶಂಸಿಸಿದ್ದಾರೆ. ತನ್ನೊಳಗಿನ ಕಲಾಸೌಂದರ್ಯವನ್ನು ಅರಳಿಸಿಕೊಂಡಿರುವ ಈ ಯುವ ನೃತ್ಯಾಂಗನೆಯ ಮೊದಲ ವೇದಿಕೆ ಪ್ರವೇಶ, ಅವಳ ಪರಿಶ್ರಮದ ಪುಷ್ಪಫಲವಾಗಿದೆ.
ಈ ಕಾರ್ಯಕ್ರಮವು ಏಪ್ರಿಲ್ 26ರಂದು (ಭಾನುವಾರ) ಬೆಳಗ್ಗೆ 10.00 ಗಂಟೆಗೆ ನಗರದ ಟೌನ್ ಹಾಲ್ ಸಮೀಪದ ಜೆ.ಸಿ. ರಸ್ತೆಯ ಎಡಿಎ ರಂಗ ಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೇಶವ ನೃತ್ಯ ಶಾಲೆಯ ನಿರ್ದೇಶಕ ಕಲಾಯೋಗಿ ಗುರು ವಿದ್ವಾನ್ ರಘುನಂದನ್ ಎಸ್, ದೇವಗಿರಿ ವೆಂಕಟೇಶ್ವರ ದೇವಾಲಯದ ಕಾರ್ಯದರ್ಶಿ ಮದನ್ ಜಿ.ಹೆಚ್., ಸಂತ ಜೋಸೆಫ್ ವಾಣಿಜ್ಯ ಕಾಲೇಜಿನ ಇಂಗ್ಲಿಷ್ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ. ಆರ್. ರಾಜಾರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಪುಷ್ಪಾಂಜಲಿ ಮೂಲಕ ಪ್ರಾರಂಭವಾಗಿ, ಅಲಾರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಾ ಹಾಗೂ ಮಂಗಳಂ ಎಂಬ ಪರಂಪರೆಯ ನೃತ್ಯ ಅಂಗಗಳನ್ನು ಒಳಗೊಂಡಿರುತ್ತದೆ. ಈ ಮೂಲಕ ಭರತನಾಟ್ಯದ ಭಾವ, ಲಯ ಮತ್ತು ತಾಳಗಳ ವೈವಿಧ್ಯತೆಯನ್ನು ಅನಾವರಣಗೊಳಿಸಲಾಗುತ್ತದೆ.
ನಟುವಾಂಗದಲ್ಲಿ ವಿದುಷಿ ವೀಣಾ ನಿಧಿ, ಗಾಯನದಲ್ಲಿ ವಿದುಷಿ ವಸುಧಾ ಬಾಲಕೃಷ್ಣ, ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಕೊಳಲಿನಲ್ಲಿ ವಿದ್ವಾನ್ ವಿವೇಕ್ ವಿ. ಕೃಷ್ಣ, ಘಟಂನಲ್ಲಿ ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಸಾಥ್ ನೀಡಲಿದ್ದಾರೆ. ವಿದುಷಿ ರೂಪಶ್ರೀ ಮಧುಸೂದನ್ ಅವರ ಮನೋಜ್ಞ ನಿರೂಪಣೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ.
ಕಾರ್ಯಕ್ರಮದ ಆಯೋಜಕರಾದ ಮಂಜುಳಾ ಹಾಗೂ ಎಸ್.ಕೆ. ಪ್ರಕಾಶ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
