ವಿಮುಕ್ತ ದೇವದಾಸಿ ತಾಯಂದಿರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ವಿಮುಕ್ತ ದೇವದಾಸಿ ತಾಯಂದಿರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ವಿಮುಕ್ತ ದೇವದಾಸಿ ತಾಯಂದಿರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಗದಗ ವಿಮುಕ್ತ ದೇವದಾಸಿ ತಾಯಂದಿರ ಸಮಗ್ರ ಅಭಿವೃದ್ಧಿ ಹಾಗೂ ಸಬಲೀಕರಣಕ್ಕಾಗಿ ಸರಕಾರ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ವಿಮುಕ್ತ ದೇವದಾಸಿ ತಾಯಂದಿರ ಮಹಾ ಒಕ್ಕೂಟ ಕರ್ನಾಟಕ ಹಾಗೂ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಗದಗ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದೇವದಾಸಿ ಪದ್ಧತಿಯಿಂದ ವಿಮುಕ್ತರಾದ ಮಹಿಳೆಯರು ಹಾಗೂ ಅವರ ಮಕ್ಕಳು ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ವಿಶೇಷ ಪ್ಯಾಕೇಜ್ ಯೋಜನೆಯನ್ನು ತಕ್ಷಣವೇ ಜಾರಿಗೆ ತರಬೇಕು ಮತ್ತು ಸರ್ಕಾರ ಅಂಗೀಕರಿಸಿರುವ 'ಕರ್ನಾಟಕ ದೇವದಾಸಿ ಕಾಯ್ದೆ-2025'ಕ್ಕೆ ಶೀಘ್ರದಲ್ಲೇ ರಾಷ್ಟ್ರಪತಿಗಳ ಅಂಕಿತ ಪಡೆದು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರಸ್ತುತ ನೀಡಲಾಗುತ್ತಿರುವ ಮಾಸಾಶನವನ್ನು ₹2,000 ದಿಂದ ₹5,000 ಕ್ಕೆ ಹೆಚ್ಚಿಸಬೇಕು, ಮಾಸಾಶನ ಪಡೆಯಲು ಇರುವ 45 ವರ್ಷಗಳ ವಯೋಮಿತಿಯನ್ನು ರದ್ದುಗೊಳಿಸಿ ಗುರುತಿಸಲ್ಪಟ್ಟ ಎಲ್ಲಾ ಮಾಜಿ ದೇವದಾಸಿ ಮಹಿಳೆಯರಿಗೂ ಸೌಲಭ್ಯ ನೀಡಬೇಕು ಹಾಗೂ ತಾಯಂದಿರ ಮರು ಸಮೀಕ್ಷೆಯನ್ನು ಯಾವುದೇ ವಯೋಮಿತಿ ಇಲ್ಲದೆ ನಡೆಸಬೇಕು. ವಸತಿ ಯೋಜನೆಯಡಿ ಮನೆ ನಿರ್ಮಾಣ ವೆಚ್ಚವನ್ನು ಗ್ರಾಮೀಣ ಪ್ರದೇಶದಲ್ಲಿ ₹5 ಲಕ್ಷಕ್ಕೆ ಹಾಗೂ ನಗರ ಪ್ರದೇಶದಲ್ಲಿ ₹7 ಲಕ್ಷಕ್ಕೆ ಹೆಚ್ಚಿಸಬೇಕು. ಇದರೊಂದಿಗೆ 2026-27ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗುವ ₹45,000 ಪ್ರೋತ್ಸಾಹಧನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು ಮತ್ತು ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯ ಹಾಗೂ ಉದ್ಯೋಗಾವಕಾಶ ಕಲ್ಪಿಸಬೇಕೆಂದು ವೇದಿಕೆಯ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಗದಗ ಜಿಲ್ಲಾ ಅಧ್ಯಕ್ಷರಾದ ಅಭಿಷೇಕ ಕೊಪ್ಪದ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್ ಮಾದರ್, ಮಹಿಳಾ ಗದಗ ಜಿಲ್ಲಾ ಅಧ್ಯಕ್ಷರಾದ ಗೌರವ್ವ ಮಾದರ್, ಪ್ರಮುಖರಾದ ಮುತ್ತವ್ವ ಹಿರೇಮನಿ, ದೇವಪ್ಪ ಮಾದರ್, ರಮೇಶ್ ಕಡೆಮನಿ, ಸುರೇಶ್ ಚಲವಾದಿ, ಬಾಲರಾಜ ಗದಗ್, ದುರ್ಗವ್ವ ಮಾದರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ