ಸಾಹಿತ್ಯಕ್ಕೆ ಬೇಂದ್ರೆ ಅವರ ಕೊಡುಗೆ ಅಪಾರ:ಪೂಜಾರ
ಸಾಹಿತ್ಯಕ್ಕೆ ಬೇಂದ್ರೆ ಅವರ ಕೊಡುಗೆ ಅಪಾರ:ಪೂಜಾರ
ಸಾಹಿತ್ಯ ಲೋಕಕ್ಕೆ ವರಕವಿ ದ.ರಾ ಬೇಂದ್ರೆ ಅವರ ಕೊಡುಗೆ ಅಪಾರವಾಗಿದ್ದು, ತಮ್ಮ ಬದುಕಿನ ಅನುಭವಗಳನ್ನು ಸಾಹಿತ್ಯದಲ್ಲಿ ತೋರಿಸಿದವರು, ಅವರು ಒಬ್ಬ ದಾರ್ಶನಿಕ ಕವಿಯೂ ಆಗಿದ್ದರು ಎಂದು ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ನಿರ್ದೇಶಕರಾದ ಪ್ರೊ. ಗೋವಿಂದ ಪೂಜಾರ ಹೇಳಿದರು.
ನಗರದ ನೂತನ ವಿದ್ಯಾಲಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡ ವಿಠ್ಠಲರಾವ್ ಕುಲಕರ್ಣಿ ತಲೆಖಾನ್ ಅವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನ ಒಂದೊಂದು ಮಜಲುಗಳಿಗೂ ಕನ್ನಡಿ ಹಿಡಿಯುವ ಕಾಯಕ ಮಾಡಿದ ಬೇಂದ್ರೆಯವರು ಸಾವಿರಾರು ಹಾಡುಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸ್ತ್ರೀ ಮೇಲಿನ ಅಪಾರವಾದ ಗೌರವದ ಫಲವಾಗಿ ಅವರಿಂದ ಹೊರಬಂದ ಒಂದೊಂದು ಕವಿತೆಗಳು ಕೂಡ ನಮ್ಮನ್ನು ಬೆಂಬಿಡದೆ ಕಾಡುತ್ತವೆ. ತಮ್ಮ ಕಾವ್ಯನಾಮದಲ್ಲಿ ಹೆತ್ತಮ್ಮನಿಗೆ ಸ್ಥಾನ ನೀಡಿದ ಅವರು ಸ್ತ್ರೀ ಎಂಥಹ ಗೌರವಕ್ಕೆ ಅರ್ಹಳು ಎನ್ನುವುದನ್ನು ತೋರಿಸಿದ್ದಾರೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವರು ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅವರ ಬರವಣಿಗೆಯಿಂದಾಗಿ ಇಂದು ಕನ್ನಡ ಸಾಹಿತ್ಯ ಎನ್ನುವುದು ಶ್ರೀಮಂತಿಕೆಯ ತೊಟ್ಟಿಲಲ್ಲಿ ತೂಗುತ್ತಿದೆ. ಅದೇ ಕಾರಣಕ್ಕಾಗಿಯೇ ನಮ್ಮ ಭಾಷೆಗೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿಗಳು ಅರಸಿ ಬಂದಿವೆ ಎಂದರು.
ಮಾತೃಭಾಷೆ ಮರಾಠಿಯನ್ನು ಬಿಟ್ಟು ಹೃದಯದ ಭಾಷೆಯಾದ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಮೂಲಕ ಕನ್ನಡದ ವರಕವಿ ಎಂದು ಪ್ರಖ್ಯಾತಿ ಗಳಿಸಿದ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಮೇರು ಶಿಖರವಾಗಿ ಗುರುತಿಸಿಕೊಳ್ಳುತ್ತಾರೆ. ಅವರ ಬರವಣಿಗೆಯಲ್ಲಿ ಸ್ತ್ರೀಗೆ ನೀಡಿದಷ್ಟು ಗೌರವ ನೀಡಿಲ್ಲ ಎಂದು ಹೇಳಿದರು.
ಬೇಂದ್ರೆ ಕುರಿತು ಉಪನ್ಯಾಸ ನೀಡಿದ ಶ್ರೀಶೈಲ್ ಮದಾಣಿ ಮಾತನಾಡಿ ಬೇಂದ್ರೆಯವರ ಸಾಹಿತ್ಯವನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಶಬ್ದಗಳಲ್ಲಿಯೇ ಆಟವಾಡುತ್ತಿದ್ದ ಅವರ ಬರವಣಿಗೆಯ ಶೈಲಿ ಇಂದಿನ ಯುವ ಬರಹಗಾರರಿಗೆ ಅಧ್ಯಯನದ ವಸ್ತುವಾಗುತ್ತದೆ. ಎಲ್ಲ ಸಾಹಿತ್ಯನ್ನು ಓದುವುದು ಸಾಧ್ಯವಾಗದೇ ಇದ್ದರೂ ಅವರ ಒಂದೊಂದು ಕವಿತೆಯ ಒಂದೊಂದು ಸಾಲನ್ನು ದಿನಕ್ಕೊಂದರಂತೆ ಓದುತ್ತ ಸಾಗಿದರು ಸಾಹಿತ್ಯ ಕ್ಷೇತ್ರದಲ್ಲಿ ದಿನಕಿಷ್ಟು ಬೆಳೆಯುತ್ತ ಸಾಗುತ್ತೇವೆ ಎಂದು ಹೇಳಿದರು.
ದತ್ತಿ ದಾಸೋಹಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ ಬೇಂದ್ರೆ ಎಂದರೆ ಬದುಕಿನ ಅನುಭವ. ಬದುಕಿನಲ್ಲಿನ ನೋವು ನಲಿವುಗಳಿಗೆ ಅಕ್ಷರ ರೂಪವನ್ನು ನೀಡಿ ಬರೆಯುತ್ತಿದ್ದ ಬೇಂದ್ರೆಯವರ ಬರವಣಿಗೆ ಇಂದಿಗೂ ಕೂಡ ಓದುಗನನ್ನು ಆಕರ್ಷಿಸುತ್ತವೆ. ಅದರಲ್ಲೂ ನಾಕುತಂತಿ, ಸಖಿಗೀತ ಸೇರಿದಂತೆ ಅವರ ಕವನ ಸಂಕಲನಗಳು ಎಲ್ಲ ವಯೋಮಾನದವರನ್ನು ಕೂಡ ಓದುವುದಕ್ಕೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು ವೇದಿಕೆ ಮೇಲೆ ಪ್ರಾಚಾರ್ಯರಾದ ಡಾ.ದಯಾನಂದ ಶಾಸ್ತ್ರಿ ಡಾ. ಮಲ್ಲಿನಾಥ ತಳವಾರ, ನಾರಾಯಣ ರಾವ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
