ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ -ಶರಣಬಸಪ್ಪಾ ದೇಶಮುಖ.
ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ-ಶರಣಬಸಪ್ಪಾ ದೇಶಮುಖ.
ಔರಾದ : ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಬೇಕಾಗಿದೆ. ದೇಶದ ಅಭಿವೃದ್ಧಿಯಾಗಬೇಕು ಎಂದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಜೀವನದಲ್ಲಿಯೇ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ *ರಾಷ್ಟ್ರೀಯ ಸೇವಾ ಯೋಜನೆ* ಜಾರಿಗೆ ತಂದರು. ನಾವು ಉಳಿಯಬೇಕು, ಬೆಳೆಯಬೇಕು ಅಂದರೆ ದೇಶದ ಅಭಿವೃಧ್ಧಿಯಲ್ಲಿ ನಾವೆಲ್ಲರೂ ಸಹಭಾಗಿತ್ವ ನೀಡಬೇಕೆಂದು ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಕಾರ್ಯದರ್ಶಿಗಳಾದ ಶರಣಬಸಪ್ಪಾ ದೇಶಮುಖ ಅವರು ನುಡಿದರು.
ಇಂದು ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸರಕಾರಿ ಪ್ರೌಢ ಶಾಲೆ ಯನಗುಂದಾದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ *ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ* ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ತಾವೆಲ್ಲರೂ ಹಾಗೆ ಆಗದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು.
ಶಿಬಿರವನ್ನು ಉದ್ಘಾಟಿಸಿ, ಸಾಹಿತಿ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು ರಚಿಸಿರುವ ಆಧುನಿಕ ಕಥನ ವಚನಗಳ “ಸ್ಮರಣಾಂಜಲಿ” ಕೃತಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಸದಸ್ಯರಾದ ರವೀಂದ್ರ ಮೀಸೆರವರು ಯುವಕರು ದೇಶ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿಯೇ ಎನ್.ಎಸ್.ಎಸ್ ಸಂಘಟನೆ ಹುಟ್ಟಿಕೊಂಡಿದೆ. ಅದೇ ಉದ್ದೇಶದಿಂದ ಎನ್.ಎಸ್.ಎಸ್. ಘಟಕದ ಮೂಲಕ ಶ್ರಮದಾನ, ಸ್ವಚ್ಛತಾ ಅಭಿಯಾನ, ಜನಜಾಗೃತಿ ಜಾಥಗಳು, ವಿಶೇಷ ಉಪನ್ಯಾಸಗಳು, ಜಾಗೃತಿ ಶಿಬಿರಗಳು ಹೀಗೆ ಇನ್ನೂ ಅನೇಕ ರಚನಾತ್ಮ ಚಟುವಟಿಕೆಗಳ ಮೂಲಕ ಯುವಜನರನ್ನು ಜಾಗೃತಗೊಳಿಸುವ ಕಾರ್ಯ ಎನ್.ಎಸ್.ಎಸ್.ಘಟಕಗಳು ಮಾಡುತ್ತಿವೆ ಎಂದು ತಿಳಿಸಿದರು.
ಯನಗುಂದಾ ಗ್ರಾಮದ ಗಣ್ಯರಾದ ಶಿವರಾಜ ದೇಶಮುಖರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಸ್ತು, ಶಾಂತಿ, ಸಹಬಾಳ್ವೆ, ಸಂಘಟನೆ, ಸಾಹಿತ್ಯದ ಅಭಿರುಚಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ ಅತ್ಯಾಚಾರಗಳು ನಿಲ್ಲಬೇಕಾದರೆ ನಮ್ಮ ಯುವಕರು ಜಾಗೃತರಾದಾಗ ಮಾತ್ರ ಸಾಧ್ಯ. ದೇಶಕ್ಕಾಗಿ ನಾವೇನು ಮಾಡಬೇಕು ಎನ್ನುವುದು ತುಂಬಾ ಮುಖ್ಯ, ನಾವೆಲ್ಲರೂ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಆದರೆ ನಾವು ನಮ್ಮ ಕರ್ತವ್ಯದ ಬಗ್ಗೆಯು ಆಲೋಚಿಸಬೇಕು ಅಂದಾಗಲೇ ಮಾತ್ರ ನಾವು ನಮ್ಮ ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ* ಜಂಟಿ ಕಾರ್ಯದರ್ಶಿ ಧನರಾಜ ತಾಂಡುರೆ, ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ, ಯನಗುಂದಾ ಗ್ರಾಮದ ಪ್ರಮುಖರಾದ ಗುರಯ್ಯ ಸ್ವಾಮಿ, ಗೋಪಾಲರಡ್ಡಿ ಬರ್ಯೆ, ಜಗದೀಶ ಪಾಟೀಲ್, ಬಸವರಾಜ ದೇಶಮುಖ, ಕೃಷ್ಣಾ, ಹಾಗೂ ಎನ್.ಎಸ್.ಎಸ್. ಅಧಿಕಾರಿ ಉತ್ತಮ ದಂಢೆ, ಶಿಕ್ಷಕರಾದ ಖುರಮ್ ಮರ್ತುಜಾ, ಮಲ್ಲಿಕಾರ್ಜುನ ಟಂಕಸಾಲೆ, ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಉತ್ತಮ ಜಾದವ, ಕಪೀಲ ಡೋಣಗಾವೆ, ತುಳಸಿರಾಮ ಮಾನೆ, ಮಲ್ಲಿಕಾರ್ಜುನ ಭಾಲ್ಕೆ, ಶಿವರಾಮ ರಾಠೋಡ, ಶೇಖ್ ಮುಜಿಬ್, ಪ್ರೀಯಾ ಸದಾಫುಲೆ, ಆರತಿ ನೌಬಾದೆ, ಸಿಕಂದರ ಚವ್ಹಾಣ, ನಿರ್ಮಲಾ ಶಿವಪೂಜೆ, ರಾಜಲಕ್ಷ್ಮಿಕಾಂತಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಉತ್ತಮ ಜಾಧವ ನಿರೂಪಿಸಿದರು. ಎನ್. ಎಸ್.ಎಸ್. ಅಧಿಕಾರಿಗಳಾದ ಉತ್ತಮ ದಂಡೆ ಅವರು ವಂದಿಸಿದರು.
