ಸಾಹಿತ್ಯ ಸಾಂಸ್ಕಾರವು ಸಂಸ್ಕೃತಿಯ ಬದುಕಿಗೆ ದಾರಿ: ಅಪ್ಪಾರಾವ ಅಕ್ಕೊಣಿ
ಸಾಹಿತ್ಯ ಸಾಂಸ್ಕಾರವು ಸಂಸ್ಕೃತಿಯ ಬದುಕಿಗೆ ದಾರಿ: ಅಪ್ಪಾರಾವ ಅಕ್ಕೊಣಿ
ಕಲಬುರಗಿ: ಸಾಹಿತ್ಯವು ಮನುಷ್ಯನಿಗೆ ಸಾಂಸ್ಕಾರ ನೀಡುತ್ತದೆ, ಆ ಸಾಂಸ್ಕಾರವೇ ಸಂಸ್ಕೃತಿಯ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದು ಅಪ್ಪಾರಾವ ಅಕ್ಕೊಣಿ ಅಭಿಪ್ರಾಯಪಟ್ಟರು.
ನಗರದ ಭಾಗ್ಯನಗರ ಬಡಾವಣೆಯ ಗುರುಕೃಪಾ ನಿಲಯದಲ್ಲಿ ವಿಜಯಕುಮಾರ ಪರುತೆ ಅವರ ಬದುಕು-ಬರಹ ಕುರಿತು ಸಿರಿಗನ್ನಡ ವೇದಿಕೆ ಕಲಬುರಗಿ ಮತ್ತು ಸಾಕ್ಷಿ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮಾಗಮ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯವನ್ನು ಉಳಿಸಿ ಬೆಳೆಸಲು ನಿರಂತರ ಚಟುವಟಿಕೆಗಳು ನಡೆಯಬೇಕು. ಸಾಹಿತಿಗಳನ್ನು ಪ್ರೋತ್ಸಾಹಿಸಿ, ಅವರ ಕೃತಿಗಳನ್ನು ಖರೀದಿಸಿ ಓದಿದಾಗ ಮಾತ್ರ ಸಾಹಿತ್ಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
‘ಒಲವನರಿಸಿ’ ಗಝಲ್ ಸಂಕಲನ ಕುರಿತು ಉಪನ್ಯಾಸ ನೀಡಿದ ಡಾ. ಸಾರಿಕಾದೇವಿ ಕಾಳಗಿ ಅವರು, ಪರುತೆ ಅವರು ಹಿಂದಿ ಭಾಷೆಯ ಪ್ರಾಧ್ಯಾಪಕರಾಗಿದ್ದು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಒಲವನರಿಸಿ’ ಕೃತಿಯಲ್ಲಿ 69 ಗಝಲ್ ಕವನಗಳಿದ್ದು, ಕಾಶಿನಾಥ್ ಅಂಬಲಗಿ ಅವರು ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು. ಗಝಲ್ ಕವನಗಳಲ್ಲಿ ಪ್ರೀತಿ-ಪ್ರೇಮದ ಭಾವನೆಗಳು ಪ್ರಧಾನವಾಗಿದ್ದು, ಮಾನವನ ಜೀವನದಲ್ಲಿ ಪ್ರೀತಿ ಬಹಳ ಮುಖ್ಯ. “ಮನದಲ್ಲಿ ಯಾರಿಗಾಗಿ ಕಾಯಬೇಡ, ಕೋರಗಬೇಡ, ಚಿಂತಿಸಬೇಡ; ಬರುವಾಗ ಬರುವನು. ನೀನು ನಿನ್ನನ್ನು ಅರಿತು ಬದುಕಬೇಕು” ಎಂಬ ಸಂದೇಶವನ್ನು ಕೃತಿ ನೀಡುತ್ತದೆ ಎಂದು ವಿವರಿಸಿದರು.
ಕುಟುಂಬಕ್ಕಾಗಿ ನಿರಂತರವಾಗಿ ದುಡಿಯುವ ಮಹಿಳೆಯ ಜೀವನದಲ್ಲಿ ಪ್ರೀತಿ ಮತ್ತು ವಿಶ್ವಾಸದ ಮಾತುಗಳು ಬಹಳ ಮಹತ್ವದ್ದಾಗಿವೆ. ಅವಳ ಕಾಯಕವನ್ನು ಅರಿತು ಗೌರವಿಸಿದಾಗ ಅವಳ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಡಾ. ವಿಜಯಕುಮಾರ ಪರುತೆ ಉಪಸ್ಥಿತರಿದ್ದರು.
ಬಯಲಲಿ ಬಾನಾಡಿ ಹಾಯುಕು ಸಂಕಲ ಕುರಿತು ಉಪನ್ಯಾಸ ನೀಡಿದ ಶ್ರೀ ಶೈಲ ಮದಾನೆ ಅವರು, ಹೈಕು ಬರಹವು ಜಪಾನ್‌ನಿಂದ ಹುಟ್ಟಿಕೊಂಡಿರುವ ಒಂದು ಚಿಕ್ಕ ಕಾವ್ಯ ಪ್ರಕಾರವಾಗಿದ್ದು, ಅತಿ ಕಡಿಮೆ ಪದಗಳಲ್ಲಿ ಗಾಢವಾದ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಮುಖ್ಯ ಲಕ್ಷಣವಾಗಿದೆ. ಸಾಮಾನ್ಯವಾಗಿ 5-7-5 ಅಕ್ಷರಗಳ ಮೂರು ಸಾಲುಗಳಲ್ಲಿ ಬರೆಯಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರುತೆ ಅವರ ಬಯಲಲ್ಲಿ ಬಾನಾಡಿ ಕೃತಿ ಕುರಿತು, ಪ್ರಕೃತಿ, ಜೀವನದ ಅನುಭವಗಳು, ಪ್ರೀತಿ, ನೋವು-ನಲಿವುಗಳು, ಮಾನವೀಯ ಭಾವನೆಗಳು ಇತ್ಯಾದಿ ವಿಷಯಗಳನ್ನು ಸರಳವಾಗಿ ಆದರೆ ಆಳವಾದ ಅರ್ಥದೊಂದಿಗೆ ಹೇಳುವುದು ಹೈಕು ಕಾವ್ಯದ ವಿಶೇಷತೆ. ಕಡಿಮೆ ಪದಗಳಲ್ಲಿ ದೊಡ್ಡ ವಿಚಾರವನ್ನು ಮನಮುಟ್ಟುವಂತೆ ಹೇಳುವ ಕಲೆಯೇ ಹೈಕು ಬರಹದ ಸೌಂದರ್ಯ . ಉಪನ್ಯಾಸ ನೀಡಿದರು.
ರೇಣುಕಾಚಾರ್ಯ ಚಿಕ್ಕಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು,ಡಾ. ಶೋಭಾ ದೇವಿ ಚಕ್ಕಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಬಿ.ಹೆಚ್. ನಿರಗುಡಿ, ಶರಣಗೌಡ ಪಾಟೀಲ ಪಾಳಾ, ವಿಶ್ವನಾಥ ಬಕರೆ, ಸಿ.ಎಸ್. ಮಾಲಿ ಪಾಟೀಲ, ಹೇಮನೂರ, ಶಿವಾನಂದ ಮಠಪತಿ, ಲೀಲಾದೇವಿ ಬಿರಾದಾರ, ಸಾಹಿತಿ ದುಕಾಣ ಸೇರಿದಂತೆ ಹಲವಾರು ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
