ಜನರನ್ನು ಚುನಾವಣೆಯಲ್ಲಿ ಮಾತ್ರ ನೆನಪಿಸಿಕೊಳ್ಳುವ ಜನಪ್ರತಿನಿಧಿಗಳು: ಸಾಹಿತಿ ಕೆ. ಮರುಳಸಿದ್ದಪ್ಪ ಟೀಕೆ

ಜನರನ್ನು ಚುನಾವಣೆಯಲ್ಲಿ ಮಾತ್ರ ನೆನಪಿಸಿಕೊಳ್ಳುವ ಜನಪ್ರತಿನಿಧಿಗಳು: ಸಾಹಿತಿ ಕೆ. ಮರುಳಸಿದ್ದಪ್ಪ ಟೀಕೆ

ಜನರನ್ನು ಚುನಾವಣೆಯಲ್ಲಿ ಮಾತ್ರ ನೆನಪಿಸಿಕೊಳ್ಳುವ ಜನಪ್ರತಿನಿಧಿಗಳು: ಸಾಹಿತಿ ಕೆ. ಮರುಳಸಿದ್ದಪ್ಪ ಟೀಕೆ

ಬೆಂಗಳೂರು, ಏ. 29: ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ನೆನಪಾಗುತ್ತಾರೆ. ಅಧಿಕಾರದ ಕುರ್ಚಿಯಲ್ಲಿ ಕುಳಿತ ನಂತರ ಜನತೆಗೆ ನೀಡಿದ ಭರವಸೆಗಳನ್ನು ಮರೆತುಬಿಡುತ್ತಾರೆ ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ತೀವ್ರವಾಗಿ ಟೀಕಿಸಿದರು.

ನಗರದ ಗಾಂಧಿ ಭವನದಲ್ಲಿ ಕೋ.ಚೆ ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಚಿಂತಕ ಪ್ರೊ. ಜಿ. ರಾಮಕೃಷ್ಣ ಅವರಿಗೆ ಕೋ. ಚೆನ್ನಬಸಪ್ಪ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಗೆಲುವಿನ ರಾಜಕೀಯ ತಂತ್ರದ ಭಾಗವಾಗಿ ಮಾತ್ರ ಜನರ ಬಗ್ಗೆ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಮೌಲ್ಯಗಳ ಅಧಃಪತನವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಚೆನ್ನಬಸಪ್ಪ, ಜಿ. ರಾಮಕೃಷ್ಣ ಹಾಗೂ ಇನ್ನುಳಿದ ಚಳವಳಿಗಾರರನ್ನು ಸ್ಮರಿಸುವುದು ಸಮಾಜಕ್ಕೆ ಹೊಸ ಬಲ ನೀಡಲಿದೆ ಎಂದು ಹೇಳಿದರು.

 ದೇಶದ ಭವಿಷ್ಯದ ಬಗ್ಗೆ ನಂಬಿಕೆ ಹೊಂದಿದವರು ಚಿಂತಕರು ಮತ್ತು ಹೋರಾಟಗಾರರ ಆದರ್ಶಗಳನ್ನು ನೆನಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ವೂಡೇ ಪಿ. ಕೃಷ್ಣ, ದೇಶದ ಹಿತ, ಮೌಲ್ಯ ಮತ್ತು ಸಮಾಜಮುಖಿ ಬದುಕಿಗೆ ತೊಡಗಿಸಿಕೊಂಡವರನ್ನು ಜಗತ್ತು ಸದಾ ಸ್ಮರಿಸುತ್ತದೆ. ಕೋ. ಚೆನ್ನಬಸಪ್ಪ ಅವರು ರಾಜಕೀಯ ಹಂಬಲವಿಲ್ಲದೆ ನಂಬಿದ ತತ್ವಗಳಿಗೆ ಬದ್ಧರಾಗಿ, ನೊಂದವರ ಕಷ್ಟಗಳಿಗೆ ಸ್ಪಂದಿಸಿದ ಅಪರೂಪದ ವ್ಯಕ್ತಿತ್ವ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ಪ್ರೊ. ಜಿ. ರಾಮಕೃಷ್ಣ ನವರು, ಚೆನ್ನಬಸಪ್ಪ ಅವರೊಂದಿಗೆ ತಮ್ಮ ಆತ್ಮೀಯ ಒಡನಾಟವನ್ನು ಸ್ಮರಿಸಿಕೊಂಡರು. ಅನೇಕ ಚಳವಳಿಗಳು, ಸಮಕಾಲೀನ ಲೇಖನಗಳು ಹಾಗೂ ಸಾಮಾಜಿಕ ವಿಚಾರಗಳ ಕುರಿತು ಅವರೊಂದಿಗೆ ಚರ್ಚಿಸಿದ ಕ್ಷಣಗಳು ಸ್ಮರಣೀಯವೆಂದು ಹೇಳಿದರು.

ಶರಣ ಚಿಂತಕ, ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಚಿಂತಕ ಸಿದ್ದನಗೌಡ ಪಾಟೀಲ ಮಾತನಾಡಿದರು. ಪ್ರೊ. ಜಿ. ರಾಮಕೃಷ್ಣ ಅವರಿಗೆ ಪ್ರಶಸ್ತಿ ಫಲಕದೊಂದಿಗೆ ₹50 ಸಾವಿರ ನಗದು ನೀಡಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷೆ ಶಾಂತಾ ಜಯಪ್ರಸಾದ್, ಡಾ. ಕೆ.ಸಿ. ಗುರುದೇವ, ಲಕ್ಷ್ಮಣ ಕೊಡಸೆ, ಹಂಪಾ ನಾಗರಾಜಯ್ಯ, ಕೆ.ಸಿ. ಮಂಜುಳಾ, ಅಗ್ರಹಾರ ಕೃಷ್ಣಮೂರ್ತಿ, ರವೀಂದ್ರ ಸಿರಿವರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ ನಿರೂಪಿಸಿದರು, ಕೋಚೆ ಅವರ ಅಳಿಯ ಕೆ.ಐ.ಗುದಗಿ ವಂದಿಸಿದರು.