ಕಲಬುರಗಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿ-ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿ-ಡಾ.ಶರಣಪ್ರಕಾಶ ಪಾಟೀಲ

ಪ್ಯಾನ್ ಇಂಡಿಯಾ "ಪ್ರಯಾಸ್" ಅಭಿಯಾನಕ್ಕೆ ಚಾಲನೆ

ಕಲಬುರಗಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿ-ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ,ಮಾ.30(ಕಲ್ಯಾಣ ಕಹಳೆ ವಾರ್ತೆ) ಮಧುಮೇಹಿ ರೋಗಿಗಳ ಚಿಕಿತ್ಸೆಗೆಂದೆ ಪ್ರತ್ಯೇಕ ಘಟಕದ ಅವಶ್ಯಕತೆ ಮನಗಂಡು ರಾಜ್ಯ ಸರ್ಕಾರ ಬೆಂಗಳೂರು ಹೊರತುಪಡಿಸಿ ಕಲಬುರಗಿ ಮತ್ತು ಮೈಸೂರಿನಲ್ಲಿ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲೋಜಿ ಘಟಕ ಸ್ಥಾಪಿಸಲಾಗುತ್ತಿದ್ದು, ಅದರಂತೆ ಇಲ್ಲಿನ ಗುಲಬರ್ಗಾ ವಿ.ವಿ. ಕ್ಯಾಂಪಸ್ ಆವರಣದಲ್ಲಿ ಕಲಬುರಗಿ ಘಟಕ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಸೋಮವಾರ ಇಲ್ಲಿನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಫೂಟ್ ಸೆಕ್ಯೂರ್, ಸ್ಟ್ರೇಟ್ ಏಡ್ ಸಂಸ್ಥೆ ಹಾಗೂ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಪ್ಯಾನ್ ಇಂಡಿಯಾ ಮಧುಮೇಹ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ (ಪ್ರಯಾಸ್) ಅಭಿಯಾನಕ್ಕೆ ಚಾಲನೆ‌ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಸಂಜಯ್ ಶರ್ಮಾ‌ ಮತ್ತು ಡಾ.ಪವನ್ ಅವರು ಮಧುಮೇಹಿ ರೋಗಿಗಳ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ "ಪ್ರಯಾಸ್" ಅಭಿಯಾನ ಕೈಗೊಂಡಿರುವುದು ತುಂಬಾ ಉಪಯುಕ್ತವಾಗಿದೆ. ಸಂಚಾರಿ ಚಿಕಿತ್ಸೆ ವಾಹನವು ಜಿಲ್ಲಾ ಮತ್ತು ತಾಲೂಕಾ ಕೇಂದ್ರಕ್ಕೆ ಹೋಗಿ ಸ್ಥಳದಲ್ಲಿಯೆ ತಪಾಸಣೆ ಮಾಡಿ ರೋಗಿಗಳಿಗೆ ಯಾವ ರೀತಿಯ ಪಾದರಕ್ಷೆ ಧರಿಸಬೇಕು, ಪಾದ ಆರೋಗ್ಯದ ಬಗ್ಗೆ ತಿಳಿಹೇಳಲಾಗುತ್ತದೆ. ಇದಕ್ಕೆ ತಕ್ಕಂತೆ‌‌ ಸಂಚಾರಿ ವಾಹನ ಅಗತ್ಯ ವೈದ್ಯಕೀಯ ಸಲಕರಣೆಗಳೊಂದಿಗೆ ಸಜ್ಜುಗೊಳಿಸಿದೆ ಎಂದರು.

ಭಾರತವು ಮಧುಮೇಹಿಯ ರಾಜಧಾನಿಯಾಗಿಬಿಟ್ಟಿದೆ. ಹೀಗಾಗಿ ಪ್ರಯಾಸ್ ಕಾರ್ಯಕ್ರಮ ಸಕ್ಕರೆ ಕಾಯಿಲೆ ಜನರಿಗೆ ತುಂಬಾ ಉಪಯುಕ್ತವಾಗಿದ್ದು, ಇದರ ಲಾಭ ರೋಗಿಗಳು ಪಡೆಯಬೇಕು. ಈ ಕುರಿತು ರಾಜ್ಯದಾದ್ಯಂತ ಜಾಗೃತಿ ಮೂಡಿಸಲು ಎಲ್ಲ ರೀತಿಯ ಸಹಕಾರ ನೀಡಲು ಮೆಡಿಕಲ್‌ ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಬಹುತೇಕ ಬಡ ಜನರಿಗೆ ಸಕ್ಕರೆ ಕಾಯಿಲೆ ಬಂದಿದ್ದೆ ಗೊತ್ತಿರಲ್ಲ. ಗೊತ್ತಿದರೂ ಪಾದ ಆರೋಗ್ಯ ಬಗ್ಗೆ ತಲೆಕೆಡಿಸಿಕೊಂಡಿರಲ್ಲ. ರೋಗಿಗಳ ನಿಷ್ಕಾಳಜಿಯಿಂದ ಕೆಲವೊಮ್ಮೆ ಪಾದ ಅಥವಾ ಅದರ ಅಂಗಾಂಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಿ ಪಾದ ಆರೋಗ್ಯದ ಚಿಕಿತ್ಸೆ ಪಡೆದಲ್ಲಿ ಪಾದಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.

ಜಿಮ್ಸ್ ಆವರಣದಲ್ಲಿ ತಾಯಿ-ಮಕ್ಕಳ ಅಸ್ಪತ್ರೆ, ಕ್ರಿಟಿಕಲ್‌ ಕೇರ್ ಯುನಿಟ್, 200 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ತಾಪಿಸಲಾಗುತ್ತಿದೆ. ಬರ್ನ್ಸ್ ಯೂನಿಟ್ ಉದ್ಗಾಟನೆಗೆ ಸಿದ್ಧಗೊಂಡಿದೆ. 371 ಹಾಸಿಗೆ ಸಾಮರ್ಥ್ಯದ ಜಯದೇವ ಆಸ್ಪತ್ರೆ ಸುಲಲಿತವಾಗಿ ನಡೆಯುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ. ಅವರಣದಲ್ಲಿ ನಿಮ್ಹಾನ್ಸ್ ಶಾಖೆ, ಇಂದಿರಾಗಾಂಧಿ ಮಕ್ಕಳ‌ ಆಸ್ಪತ್ರೆ ಘಟಕ ನಿರ್ಮಾಣ ಕಾರ್ಯ ಸಹ ಪ್ರಗತಿಯಲ್ಲಿದ್ದು, ಇವೆಲ್ಲವು ಕಲಬುರಗಿಯನ್ನು ಮೆಡಿಕಲ್ ಹಬ್ ಆಗಿ ಪರಿವರ್ತಿಸಿದೆ ಎಂದು ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

*ಸ್ಕಿಲ್‌ ಲ್ಯಾಬ್ ಸ್ಥಾಪನೆ,ವರ್ಷಕ್ಕೆ 1,000 ಯುವಕರಿಗೆ ಕೌಶಲ್ಯ:*

ಇತ್ತೀಚೆಗೆ ಮಂಡಿಸಲಾದ 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಐ.ವಿ.ಎಫ್. ಸೆಂಟರ್ ಸ್ಥಾಪಿಸಲು ಘೋಷಿಸಿದ್ದು, ಅದನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತದೆ. ಇದಲ್ಲದೆ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಜೊತೆಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಸ್ಕಿಲ್‌ ಲ್ಯಾಬ್ ಕಲಬುರಗಿಯಲ್ಲಿ ಸ್ಥಾಪನೆಗೆ ಘೋಷಣೆ ಮಾಡಲಾಗಿದ್ದು, ಸ್ಕ್ನೈಡರ್ ಸಂಸ್ಥೆಯ ಸಹಯೋಗದಿಂದ ಪ್ರತಿ ವರ್ಷ 1,000 ಜನ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಪ್ಲೇಸ್ ಮೆಂಟ್ ಸಹ ನೀಡಲಾಗುತ್ತದೆ ಎಂದರು ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಇದಕ್ಕು ಮುನ್ನ ಫೂಟ್ ಸೆಕ್ಯೂರ್ ಸಂಸ್ಥೆಯ ವೈದ್ಯರಾದ ಡಾ.ಸಂಜಯ್‌ ಶರ್ಮಾ ಮಾತನಾಡಿ ವಿಶ್ವದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಕ್ಯಾನ್ಸರ್ ಗ್ಗಿಂತ ಹೆಚ್ಚಾಗಿದೆ. ಇದರ ಮೋಟಾಲಿಟಿ ರೇಟ್ ಸಹ ಹೆಚ್ಚಾಗಿದೆ. ಪಾದ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿದಲ್ಲಿ ಶೇ.80ರಷ್ಟು ಪ್ರಕರಣದಲ್ಲಿ ಕಾಲು, ಬೆರಳುಗಳನ್ನು ಕಳೆದುಕೊಳ್ಳುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಪ್ರಯಾಸ್ ಜಾಗೃತಿ ಮಹತ್ವದ್ದಾಗಿದೆ. ಅದು ಕಲಬುರಗಿಯಂತಹ ಟೈರ್ 2 ಸಿಟಿನಿಂದಲೆ‌ ಆರಂಭಿಸಿರುವುದು ಸಂತಸ‌ ತಂದಿದೆ ಎಂದರು.

ನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಪ್ಯಾನ್ ಇಂಡಿಯಾ ಮಧುಮೇಹ ಪಾದಗಳ ಆರೋಗ್ಯ - ಜಾಗೃತಿ, ಸಲಹೆ ಮತ್ತು ಸ್ಕ್ರೀನಿಂಗ್ (ಪ್ರಯಾಸ್) ಅಭಿಯಾನಕ್ಕೆ ಚಾಲನೆ‌ ನೀಡಿದರು.

ಕಾರ್ಯಕ್ರಮದಲ್ಲಿ ಫೂಟ್ ಸೆಕ್ಯೂರ್ ಸಂಸ್ಥೆಯ ವೈದ್ಯ ಡಾ. ಪವನ ಬೆಲ್ಲಹಳ್ಳಿ, ಯಾದಗಿರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಸಂದೀಪ, ಜಿಲ್ಲಾ ಶಸ್ತ್ರಜ್ಞೆ ಡಾ. ಅಸ್ನಾ ರುಕಿಯಾ ರಬಾ, ರೋಟರಿ ಕ್ಲಬ್ ಅಧ್ಯಕ್ಷ ಡಾ.ಅನಂತ‌ ಚಿಂಚೋಳಿ, ಅಭ್ಯುದಯ ಸಂಸ್ಥೆಯ ಡಾ.ಭೀಮಾಶಂಕರ ಟೆಂಗಳಿ ಇದ್ದರು. ಜಿಮ್ಸ್ ನಿರ್ದೇಶಕ‌ ಡಾ.ಉಮೇಶ ಎಸ್.ಆರ್ ಸ್ವಾಗತಿಸಿದರು. 

ಉಪ ವೈದ್ಯಕೀಯ ಅಧೀಕ್ಷಕ ಡಾ.ರೇವಣಸಿದ್ದ ಬಿ. ವಂದಿಸಿದರು. ಮಡಿವಾಳಪ್ಪ ನಿರೂಪಿಸಿದರು. ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್ ಪ್ರಸ್ತಾವಿಕವಾಗಿ ಮಾತನಾಡಿ ಪ್ರಯಾಸ್ ಅಭಿಯಾನದ ಕುರಿತು ವಿವರಣೆ ನೀಡಿದರು.