ತೊಗರಿ ಬೆಳೆಗಾರರ ಸಂರಕ್ಷಣೆಗೆ ಜನವರಿ 6ರಂದು KPRS ಪ್ರತಿಭಟನೆ

ತೊಗರಿ ಬೆಳೆಗಾರರ ಸಂರಕ್ಷಣೆಗೆ ಜನವರಿ 6ರಂದು KPRS ಪ್ರತಿಭಟನೆ

ತೊಗರಿ ಬೆಳೆಗಾರರ ಸಂರಕ್ಷಣೆಗೆ ಜನವರಿ 6ರಂದು KPRS ಪ್ರತಿಭಟನೆ 

ಕಲಬುರಗಿ: ತೊಗರಿ ಬೆಳೆಗಾರರ ಸಂರಕ್ಷಣೆ, ಬೆಂಬಲ ಬೆಲೆ (MSP) ಕಾನೂನು ಜಾರಿ, ಬೆಳೆ ವಿಮೆ ಹಣ ಬಿಡುಗಡೆ ಹಾಗೂ ಬೆಳೆ ನಷ್ಟ ಪರಿಹಾರದಲ್ಲಿ ಆಗಿರುವ ತಾರತಮ್ಯ ನಿವಾರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಿನಾಂಕ 6/1/2026ರಂದು ಕಲಬುರಗಿ ಎಪಿಎಂಸಿ ಕಚೇರಿ ಹಾಗೂ ಇಸ್ಕೋ ಟೋಕಿಯೊ ಬೆಳೆ ವಿಮಾ ಕಂಪನಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಆರ್ಥಿಕತೆ ತೊಗರಿ ಬೆಳೆಯ ಮೇಲೆ ಅವಲಂಬಿತವಾಗಿದ್ದು, ಬಂಪರ್ ಬೆಳೆ ಬಂದರೂ ರೈತರಿಗೆ ಸೂಕ್ತ ಬೆಲೆ ಸಿಗದೇ ತೀವ್ರ ಸಂಕಷ್ಟ ಎದುರಾಗುತ್ತಿದೆ ಎಂದು ಹೇಳಿದರು. ಬರ ಹಾಗೂ ಅತಿವೃಷ್ಟಿಯಿಂದ ಬೆಳೆ ನಷ್ಟವಾದರೂ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ತೊಗರಿ ಬೆಳೆಗಾರರ ಜಾಥಾ ನಡೆಸಿ ಸರ್ಕಾರ ಇನ್‌ಸೆಂಟಿವ್ ನೀಡುವ ಭರವಸೆ ನೀಡಿದ್ದರೂ ಇದುವರೆಗೆ ರೈತರಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಕೈತೊಳೆದುಕೊಂಡ ಪರಿಣಾಮ ಎಪಿಎಂಸಿ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತಗೊಂಡಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ ಸೇರಿದಂತೆ ವಿವಿಧ ಬೆಳೆಗಳು ವ್ಯಾಪಕವಾಗಿ ಬಿತ್ತನೆಯಾಗಿದ್ದು, ಉತ್ತಮ ಬೆಳೆ ಬಂದರೂ ಅತಿವೃಷ್ಟಿಯಿಂದ ನಷ್ಟ ಸಂಭವಿಸಿದೆ. ಆದರೆ ಬೆಳೆ ನಷ್ಟ ಪರಿಹಾರ ಕೆಲವರಿಗೆ ಮಾತ್ರ ಸಿಕ್ಕಿದ್ದು, FID ಸಂಖ್ಯೆ ಇದ್ದರೂ ಹಲವರಿಗೆ ಪರಿಹಾರ ಸಿಗದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು. ತೊಗರಿಯಲ್ಲಿ ಹೆಚ್ಚಾಗುತ್ತಿರುವ ಗೊಡ್ಡು ರೋಗದ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ, ಹೊಸ ಹಾಗೂ ಉತ್ತಮ ತೊಗರಿ ತಳಿ ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ KPRS ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಖಜಾಂಚಿ, ಸಹ ಕಾರ್ಯದರ್ಶಿಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

-