ಕಲ್ಬುರ್ಗಿ ಸಂಪುಟ ಸಭೆ ನಿರ್ಣಯಗಳು ಜನರ ಕಣ್ಣಿಗೆ ಮಣ್ಣೆರಚುವ ಯತ್ನ ಅಷ್ಟೇ: ಬಿಜೆಪಿ ವಕ್ತಾರ ಡಾ: ಸುಧಾ ಆರ್ ಹಾಲಕಾಯಿ

ಕಲ್ಬುರ್ಗಿ ಸಂಪುಟ ಸಭೆ ನಿರ್ಣಯಗಳು ಜನರ ಕಣ್ಣಿಗೆ ಮಣ್ಣೆರಚುವ ಯತ್ನ ಅಷ್ಟೇ: ಬಿಜೆಪಿ ವಕ್ತಾರ  ಡಾ: ಸುಧಾ ಆರ್ ಹಾಲಕಾಯಿ

ಕಲ್ಬುರ್ಗಿ ಸಂಪುಟ ಸಭೆ ನಿರ್ಣಯಗಳು ಜನರ ಕಣ್ಣಿಗೆ ಮಣ್ಣೆರಚುವ ಯತ್ನ ಅಷ್ಟೇ: ಬಿಜೆಪಿ ವಕ್ತಾರ ಡಾ: ಸುಧಾ ಆರ್ ಹಾಲಕಾಯಿ

ಸೆಪ್ಟೆಂಬರ್ 17ರಂದು ಕಲ್ಬುರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಸಂಪುಟದ ತೀರ್ಮಾನ- ಹೊಸ ಬಾಟಲಿಯಲ್ಲಿ ಹಳೆ ಮದ್ಯ ತುಂಬಿದಂತೆ ಇದೆ.

ಸಂಪುಟ ಸಭೆಯ ಕುರಿತು ಪಡೆದುಕೊಂಡ ಪ್ರಚಾರದಲ್ಲಿ ಇರುವಂತಹ ಯಾವುದೇ ವಿಚಾರಗಳ ಲವಲೇಶವೂ ಈ ಸಂಪುಟ ನಿರ್ಣಯದಲ್ಲಿ ಇಲ್ಲ.ಆ ಭಾಗಕ್ಕೆ ಸಚಿವಾಲಯ ಬೇಕು ಎನ್ನುವ ಬೇಡಿಕೆಯ ಬಗ್ಗೆ ಒಂದು ಹೊಸ ತೀರ್ಮಾನ ಬಿಟ್ಟರೆ, ಉಳಿದೆಲ್ಲವೂ ಹಿಂದಿನ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳನ್ನೇ ಪುನರಾವರ್ತನೆ ಮಾಡಲಾಗಿದೆ. ಎಂದು ಬಿಜೆಪಿ ವಕ್ತಾರರಾದ ಡಾ: ಸುಧಾ ಆರ್ ಹಾಲಕಾಯಿ ಹೇಳಿದ್ದಾರೆ.

11,300 ಕೋಟಿ ರೂ.ಗಳನ್ನು 46 ಬೇರೆ ಬೇರೆ ಅಂಶಗಳಿಗೆ ಕೊಡ್ತೇವೆ ಎಂದು ಹೇಳಿರುವುದು ನಂಬಲು ಅರ್ಹವಾದುದಲ್ಲ. ಏಕೆಂದರೆ ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್‌ನ ಅಸಮರ್ಥ ಸರಕಾರದ ನಡವಳಿಕೆ ನೋಡಿದಾಗ ಇದು ನಿಜಕ್ಕೂ ಕನಸಿನ ಮಾತೇ ಸರಿ ಎಂಬಂತಾಗಿದೆ.

ಉದ್ಯೋಗ ಸೃಷ್ಟಿಗೆ ಯಾವುದೇ ಒಂದು ದೃಢ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಗತಿಗೆ ಬೇಕಾದ ಯಾವುದೇ ಒಂದು ಮಾರ್ಗೋಪಾಯ ಈ ಸಂಪುಟದ ತೀರ್ಮಾನದಲ್ಲಿ ಇಲ್ಲ. ಯಾರನ್ನೋ ಓಲೈಸಬೇಕು ಎಂಬ ವಿಚಾರಕ್ಕೆ ಮಾತ್ರ ಸಂಪುಟ ಸಭೆ ಸೀಮಿತವಾಗಿತ್ತು.

ಸ್ವತಃ 40 ವರ್ಷಗಳ ಕಾಲ ಆ ಭಾಗದ ಜನಪ್ರತಿನಿಧಿಯಾಗಿ, ಈಗ ಕಾಂಗ್ರೆಸ್‌ನ ಅತ್ಯಂತ ದೊಡ್ಡ ರಾಷ್ಟ್ರೀಯ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆ ಭಾಗದ ಸರ್ವಾಂಗೀಣ ವಿಕಾಸದ ಬಗ್ಗೆ ಗಮನ ಹರಿಸದೆ ಇಡೀ ಕರ್ನಾಟಕದಲ್ಲಿ ಅತೀ ಹಿಂದುಳಿದ ಜಿಲ್ಲೆಯನ್ನಾಗಿ ಮಾಡಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ.

ರಾಜ್ಯದ ಬೇರೆ ಎಲ್ಲ ಪ್ರದೇಶಗಳು ಎಷ್ಟು ವಿಕಾಸ ಆಗಿವೆ ಎಂಬುದನ್ನು ಗಮನಿಸಿದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಆ ಭಾಗದಲ್ಲಿ 40 ವರ್ಷ ರಾಜಕಾರಣ ಮಾಡಿ ಪ್ರತಿನಿಧಿಸಿದವರೇ ಅದಕ್ಕೆ ನೇರ ಹೊಣೆಗಾರರಾಗುತ್ತಾರೆ. ಅವರು ತಮ್ಮದೇ ಸಾಮ್ರಾಜ್ಯ ಕಟ್ಟಲು ಶ್ರಮಿಸಿ, ಜನರನ್ನು ಭಯಭೀತರನ್ನಾಗಿ ಮಾಡಲು ಶ್ರಮಿಸಿದರೇ ಹೊರತು ಬೇರೆ ಯಾವುದೇ ಅಭಿವೃದ್ಧಿಪರ ವಿಚಾರ ಈ ಸಂಪುಟ ಸಭೆಯ ತೀರ್ಮಾನದಲ್ಲಿ ಇಲ್ಲ.

ಕೈಗಾರಿಕೆಗಳನ್ನು ತರಬೇಕಾಗಿತ್ತು. ಉದ್ಯೋಗ ಸೃಷ್ಟಿಯ ಮೂಲಕ ಆ ಭಾಗದ ಯುವಕರಿಗೆ ಜೀವನೋಪಾಯ ಕಲ್ಪಿಸಬೇಕಾಗಿತ್ತು. ಅಲ್ಲಿನ ಜನ ವಲಸೆ ಹೋಗುವುದನ್ನು ತಪ್ಪಿಸಿ ಅವರ ಕೈಗಳಿಗೆ ಉದ್ಯೋಗ ಕೊಡಬೇಕಾಗಿತ್ತು. 

ಇವತ್ತು ಆ ಭಾಗದ ಜನರಲ್ಲಿ ದುಡಿಮೆ ಮಾಡುವಂತಹ ಮನಸ್ಥಿತಿ ಇದ್ದರೂ ಅದಕ್ಕೆ ತಕ್ಕದುದಾದ ಅವಕಾಶಗಳು ಸೃಷ್ಟಿಯಾಗಿಲ್ಲ. ಈ ಭಾಗಕ್ಕೆ ಎಷ್ಟೇ ರೈಲುಗಳ ಓಡಾಟವನ್ನು ಹಾಕಿದರೂ ಇಲ್ಲಿನ ಜನ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗಲು ಈ ಸೌಲಭ್ಯವನ್ನು ಬಳಸುವಂತಾಗಿದೆ.

ಪೌಷ್ಟಿಕಾಂಶ ಮತ್ತು ಮಹಿಳಾ ಆರೋಗ್ಯದ ವಿಚಾರವಾಗಿ ಸಂಪುಟದ ನಿರ್ಣಯ ತೋರಿಕೆಯದ್ದೇ ಹೊರತು ವಾಸ್ತವ ಸ್ಥಿತಿಯನ್ನು ಆಧರಿಸಿದ್ದಲ್ಲ.

ಸ್ವತಃ ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್. ಪಾಟೀಲ್ ಅವರೇ ಸಂಪುಟದ ನಿರ್ಣಯದ ಬಗ್ಗೆ ಸಂದೇಹ, ಅಪನಂಬಿಕೆ ವ್ಯಕ್ತಪಡಿಸುತ್ತಾರೆ ಎಂದರೆ, ಸಂಪುಟ ನಿರ್ಣಯಗಳ ಗಟ್ಟಿತನ ಯಾವಮಟ್ಟದ್ದು ಎಂಬುದನ್ನು ಊಹಿಸಬಹುದು.

ವಾಸ್ತವ ನೆಲೆಗಟ್ಟಿನಲ್ಲಿ ಯಾವುದೇ ಒಂದು ಮೂಲಭೂತ ಸೌಕರ್ಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಾದ ವಿಚಾರ ಸಂಪುಟ ನಿರ್ಣಯದಲ್ಲಿಲ್ಲ. 

ಯಾವುದೇ ರಾಜಕೀಯ ಇಚ್ಛಾಶಕ್ತಿಯಿಲ್ಲದ ಮತ್ತು ಜನರನ್ನು ಮೋಸ ಮಾಡುವಂತಹ ಒಂದು ಪ್ರಯತ್ನವಾಗಿ ಈ ಸಂಪುಟ ಸಭೆ ನಡೆಯಿತೇ ಹೊರತು ನಿಜವಾದ ಅಭಿವೃದ್ಧಿಯ ಕಾಳಜಿಯಿಂದಲ್ಲ. ಇದು ಒಂದು ಭ್ರಮನಿರಸನ ಉಂಟುಮಾಡಿ ಸಂಪುಟ ಸಭೆ ಅಷ್ಟೇ. ಕಾಂಗ್ರೆಸ್‌ನ ಈ ಮೋಸದ ನಡೆಯನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಎಂದು ಡಾ: ಸುಧಾ ಆರ್ ಹಾಲಕಾಯಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.