ವಿಶ್ವಮಾನವ ಸಂದೇಶದ ಮಹಾಕವಿ ಕುವೆಂಪು ಕುರಿತು ವಿಶೇಷ ಉಪನ್ಯಾಸ

ವಿಶ್ವಮಾನವ ಸಂದೇಶದ ಮಹಾಕವಿ ಕುವೆಂಪು ಕುರಿತು ವಿಶೇಷ ಉಪನ್ಯಾಸ

ವಿಶ್ವಮಾನವ ಸಂದೇಶದ ಮಹಾಕವಿ ಕುವೆಂಪು ಕುರಿತು ವಿಶೇಷ ಉಪನ್ಯಾಸ

ಬೀದರ : ದಿನಾಂಕ 23-12-2025 ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬೀದರ ಇವರ ಸಹಯೋಗದಲ್ಲಿ ವಿಶ್ವಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ಶ್ರೀಮತಿ ಭಾರತಿ ವಸ್ತ್ರದ ಅವರು ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು, ಕನ್ನಡ ನುಡಿ ಹಾಗೂ ಭಾರತೀಯ ಸಂಸ್ಕೃತಿ ಅಪಾರ ಸಮೃದ್ಧಿಯನ್ನು ಹೊಂದಿವೆ. ಕನ್ನಡವನ್ನು ಹೆಚ್ಚು ಬಳಕೆ ಮಾಡಿದಾಗಲೇ ಅದು ಬೆಳೆಯುತ್ತದೆ. ಕುವೆಂಪು ಕನ್ನಡದ ಮಹಾನ್ ಆಸ್ತಿ. ಅವರ ಅನೇಕ ಕೃತಿಗಳು ಚಲನಚಿತ್ರಗಳಾಗಿದ್ದು, ಅವರ ಸಾಹಿತ್ಯ ಜನರಿಗೆ ದಾರಿದೀಪವಾಗಿದೆ. ಕುವೆಂಪು ಅವರನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.

ಆಶಯ ನುಡಿಯನ್ನು ಗ್ರಾಮ ಪಂಚಾಯತ್ ಚಿಟ್ಟವಾಡಿಯ ಅಧ್ಯಕ್ಷರಾದ ಶ್ರೀ ರಮೇಶ್ ಬಿರಾದಾರ ಅವರು ಮಾತನಾಡಿ, ಗಡಿಭಾಗದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಅಗತ್ಯ. ಗಡಿಭಾಗದಲ್ಲಿ ಕುವೆಂಪು ಅವರ ಪರಿಚಯ ಮಾಡಿಸುವ ಕಾರ್ಯ ನಡೆಯಬೇಕು. ಗಡಿಭಾಗ ಸುಧಾರಿತವಾದರೆ ಕನ್ನಡ ಬಳಕೆ ಇನ್ನಷ್ಟು ಸುಲಭವಾಗುತ್ತದೆ. ಕನ್ನಡವು ಜನರ ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಾಜಕುಮಾರ ಅಲ್ಲೂರೆಯವರು ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಯೂ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಅಗತ್ಯವಿದೆ. ಸುವ್ಯವಸ್ಥಿತ ಮತ್ತು ಸಮೃದ್ಧ ಭಾಷೆ ನಮ್ಮ ಕನ್ನಡ. ಕುವೆಂಪು ಮಹಾನ್ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಮನಸ್ಸು ಸದಾ ಬಡವರಿಗಾಗಿ ಮಿಡಿಯುತ್ತಿತ್ತು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮೀಕಾಂತ ಶಂಕರ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾದ ಶ್ರೀ ಪಾಂಡುರಂಗ ಬೆಂಬೂಳಗಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಿರಂತರ ಕಲಿಕೆ ಅಗತ್ಯ. ಉತ್ತಮ ಜೀವನಕ್ಕಾಗಿ ಕಷ್ಟಪಟ್ಟು ಕಲಿಯಬೇಕು. ಶ್ರದ್ಧೆ ಮತ್ತು ಭಕ್ತಿ ವ್ಯಕ್ತಿಯನ್ನು ಎತ್ತರದ ಮಟ್ಟಕ್ಕೆ ಕರೆದೊಯ್ಯುತ್ತವೆ ಎಂದು ಹೇಳಿದರು.

ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಅವರು ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಅತ್ಯಂತ ಅಗತ್ಯ. ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಬೇಕು. ಕವಿಗಳು, ಕಲಾವಿದರ ಪರಿಚಯವಾದರೆ ಮಕ್ಕಳು ಓದಿನತ್ತ ಆಸಕ್ತಿ ತೋರಿಸುತ್ತಾರೆ. ಓದುವ ಹವ್ಯಾಸ ಬೆಳೆದರೆ ಅದು ನಿರಂತರವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಗೌರಮ್ಮ ಅವರು ಜನಪದ ಗೀತೆ ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಶ್ರೀ ರಮೇಶ್ ಪೂಜಾರಿ ಅವರು ನಿರೂಪಿಸಿದರು. ಶ್ರೀ ಗೌಡಪ್ಪ ಜಿ. ಅವರು ಸ್ವಾಗತಿಸಿ, ಶ್ರೀ ವೀರಶೆಟ್ಟಿ ಕುಂಬಾರ ವಂದಿಸಿದರು. ಕಾಲೇಜಿನ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.