ರಂಗ ಚಟುಚಟಿಕೆಗೆ ಪ್ರೋತ್ಸಾಹ ಅಗತ್ಯ-ಎಂ.ವೈ.ಪಾಟೀಲ
ಕಾಲಚಕ್ರ ನಾಟಕ ಪ್ರದರ್ಶನಕ್ಕೆ ಚಾಲನೆ:
ರಂಗ ಚಟುಚಟಿಕೆಗೆ ಪ್ರೋತ್ಸಾಹ ಅಗತ್ಯ-ಎಂ.ವೈ.ಪಾಟೀಲ
ಕಲಬುರಗಿ,ನ.15(ಕರ್ನಾಟಕ ವಾರ್ತೆ) ಬೆಂಗಳೂರು, ಮೈಸೂರಿಗಿಂತ ಹೆಚ್ಚಿನ ಪ್ರತಿಭೆಯುಳ್ಳ ಕಲಾವಿದರು ನಮ್ಮಲ್ಲಿಯೂ ಇದ್ದಾರೆ. ಅವರಿಗೆ ವೇದಿಕೆ ಮತ್ತು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ "ಕಾಲಚಕ್ರ" ನಾಟಕ ಪ್ರದರ್ಶನವನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಂಗ ಚಟುವಟಿಕೆಗಳಿಗೆ ಉತ್ತೇಜನ ಅನುದಾನ ನೀಡುವಂತೆ ರಂಗಾಯಣದ ನಿರ್ದೇಶಕರು ಕೆ.ಕೆ.ಆರ್.ಡಿ.ಬಿ. ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಅಧ್ಯಕ್ಷರು ಸಹ ಅನುದಾನ ನೀಡಲು ಭಾಗಶಃ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಸಂಗೀತ, ಸಾಹಿತ್ಯ ಅಂದರೆ ದೇಶದ ಸಂಸ್ಕೃತಿ ಎಂದು ಭಾವಿಸಬೇಕು. ನಮ್ಮಲ್ಲಿರುವ ಸಂಗೀತ, ಸಾಹಿತ್ಯ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ನಮ್ಮ ಸಂಗೀತಕ್ಕೆ ದೇವರೇ ಪ್ರತ್ಯಕ್ಷ ಆಗುವ ಭಾವನೆ ಕಾಣುತ್ತೇವೆ. ಆದರೆ, ವಿದೇಶದ ಸಂಗೀತಕ್ಕೆ ದೆವ್ವಗಳೇ ಓಡಿ ಹೋಗುತ್ತವೆ. ನಮ್ಮ ದೇಶದ ಸಂಸ್ಕೃತಿ, ಸಾಹಿತ್ಯ, ಸಂಗೀತ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಕರ್ನಾಟಕದ ಸಂಗೀತ ಭಾರತ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವುದು ಅಭಿಮಾನದ ಸಂಗತಿಯಾಗಿದೆ’ ಎಂದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಅನಿತಾ ಆರ್, ಕೆ.ಕೆ.ಆರ್.ಡಿ.ಬಿ ಅಧೀನ ಕಾರ್ಯದರ್ಶಿ ಸುರೇಖಾ, ಹಿರಿಯ ಸಾಹಿತಿ ಪ್ರೊ. ಆರ್.ಕೆ. ಹುಡಗಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್, ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ (ರಿ) ಪ್ರಧಾನ ಕಾರ್ಯದರ್ಶಿಗಳಾದ ನ್ಯಾಯವಾದಿ ವೈಜನಾಥ ಎಸ್. ಝಳಕಿ., ಖಾದ್ರಿ, ನಾಟಕದ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಇದ್ದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಶಿಂಧೆ ಸ್ವಾಗತಿಸಿದರು.
ರಂಗಾಯಣದ ರೆಪರ್ಟರಿ ಕಲಾವಿದರಿಂದ ಸುಮಾರು ಎರಡು ಗಂಟೆಗಳ ಕಾಲ “ಕಾಲಚಕ್ರ” ನಾಟಕವು ಪ್ರದರ್ಶನಗೊಂಡಿತ್ತು. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಲಾವಿದರು ಯಶ ಕಂಡರು. ವಯೋವೃದ್ಧರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಈ ನಾಟಕವನ್ನು ಮನಸ್ಸಿಗೆ ಮುಟ್ಟುವಂತೆ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ರಚಿಸಿದ್ದಾರೆ. ರವಿವಾರ ಸಹ ಸಂಜೆ 6 ಗಂಟೆಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ. ಪ್ರವೇಶ ಉಚಿತವಾಗಿದ್ದು, ಯುವಜನತೆ, ಮಕ್ಕಳು, ಉದ್ಯೋಗಸ್ಥರು, ಮಹಿಳೆಯರು ನಾಟಕ ವೀಕ್ಷಿಸಬಹುದಾಗಿದೆ.
