ಸಾಲ ಮನ್ನಾ ಹಸಿಬರ ಘೋಷಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹದಲ್ಲಿ ಡಾ. ಪ್ರಣವಾನಂದ ಶ್ರೀ ಹೇಳಿಕೆ

ಸಾಲ ಮನ್ನಾ ಹಸಿಬರ ಘೋಷಣೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹದಲ್ಲಿ ಡಾ. ಪ್ರಣವಾನಂದ ಶ್ರೀ ಹೇಳಿಕೆ
ರೈತರ ನೋವಿಗೆ ಈಡಿಗ ಸಮುದಾಯದ ಸಂಪೂರ್ಣ ಬೆಂಬಲ
ಕಲಬುರಗಿ : ರೈತರ ನೋವು ಅದು ದೇಶದ ನೋವಾಗಿದ್ದು ಅನ್ನದಾತರ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ನೆರವಿಗೆ ಧಾವಿಸಬೇಕು.ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಂಪೂರ್ಣ ಬೆಂಬಲವಿದೆ ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ಹೇಳಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಕಲಬುರಗಿ ಜಗತ್ ವೃತ್ತದಲ್ಲಿ ಅಕ್ಟೋಬರ್ 2 ರಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಅಕ್ಟೋಬರ್ 13ರ ಕಲಬುರಗಿ ಬಂದ್ ಗೆ ಈಡಿಗ ಸಮುದಾಯವು ಸಂಪೂರ್ಣ ಬೆಂಬಲ ನೀಡಲಿದೆ. ಸಮುದಾಯದವರ ಅಂಗಡಿ ಮುಗ್ಗಟ್ಟುಗಳನ್ನು ಆ ದಿನ ಬಂದ್ ಮಾಡಿ, ಆಟೋ ಚಾಲಕರು ಕೂಡ ಬಂದ್ ಗೆ ಕೈಜೋಡಿಸಲಿದ್ದಾರೆ. ರೈತ ಕಷ್ಟಕ್ಕೆ ಸಿಲುಕಿದರೆ ಅದು ರಾಷ್ಟ್ರ ಸಂಕಷ್ಟಕ್ಕೆ ಸಿಲುಕಿದಂತೆ. ದೇವರಿಗೆ ನೈವೇದ್ಯ, ಜನರಿಗೆ ಹಸಿವು ನೀಗಿಸುವ ಅಣ್ಣ ನೀಡುವ ರೈತಾಪಿ ವರ್ಗ ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾಗಿದ್ದು ನೆರವನ್ನು ಕೋರಿ ಆಗ್ರಹಿಸುತ್ತಿರುವುದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸ್ವಾಮೀಜಿ ಹೇಳಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ದಯಾನಂದ ಪಾಟೀಲ್ ಮಾತನಾಡಿ ರೈತರು ಅತಿವೃಷ್ಟಿಗೆ ಸಿಲುಕಿ ಈ ಬಾರಿ ಹಬ್ಬವನ್ನು ಕೂಡ ಆಚರಿಸದ ಸ್ಥಿತಿ ಎದುರಾಗಿದೆ. ಅದಕ್ಕಾಗಿ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕು, ಸಾಲಮನ್ನಾ, ರಾಷ್ಟ್ರೀಯ ವಿಪತ್ತು ಪರಿಹಾರ ವಿತರಣೆ, ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕೂಡಲೇ ರಾಜ್ಯ ಸರ್ಕಾರ ಪ್ರಕಟಿಸುವಂತೆ ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಈಡಿಗ ನಾಯಕರದ ವೆಂಕಟೇಶ ಗುಂಡಾನೂರು, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಡಾ. ಸದಾನಂದ ಪೆರ್ಲ , ರಮೇಶ್ ಗುತ್ತೇದಾರ್, ರೈತ ಮುಖಂಡರಾದ ಅನಿಲ್ ಡಾಂಗೆ, ಯಲ್ಲಾಲಿಂಗ ಪೂಜಾರಿ, ಮಹೇಶ್ ಕಡೇಚೂರ್ ಮಲ್ಲಿಕಾರ್ಜುನ ಪೂಜಾರಿ, ಭೀಮಾಶಂಕರ ಮಾಡಿಯಾಳ, ಶರಣಬಸಪ್ಪ ಗಣಜಲಖೇಡ್ , ನಾಗಪ್ಪ ರಾಯಚೂರಕರ, ಸಾಜಿದ ಅಹಮದ್ ಮತ್ತಿತರು ಭಾಗವಹಿಸಿದ್ದರು.