ಖರ್ಗೆ ಕುಟುಂಬದ ದುರಾಡಳಿತವೇ ಕಲ್ಯಾಣ ಕರ್ನಾಟಕದ ಹಿನ್ನಡೆಗೆ ಕಾರಣ: ಬಿಜೆಪಿ ವಾಗ್ದಾಳಿ

ಖರ್ಗೆ ಕುಟುಂಬದ ದುರಾಡಳಿತವೇ ಕಲ್ಯಾಣ ಕರ್ನಾಟಕದ ಹಿನ್ನಡೆಗೆ ಕಾರಣ: ಬಿಜೆಪಿ ವಾಗ್ದಾಳಿ
ಕಲಬುರಗಿ: “ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕನಸಾಗಿಯೇ ಉಳಿದಿದ್ದು, ಇದರ ಹೊಣೆ ಖರ್ಗೆ ಕುಟುಂಬದ ದೀರ್ಘಕಾಲೀನ ದುರಾಡಳಿತ” ಎಂದು ಬಿಜೆಪಿ ರಾಜ್ಯ ವಕ್ತಾರ ಡಾ. ಸುಧಾ ಆರ್. ಹಾಲಕಾಯಿ ಆರೋಪಿಸಿದರು.
ನಿನ್ನೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ನೀಡಿದ ಹೇಳಿಕೆಗಳನ್ನು ಟೀಕಿಸಿದ ಅವರು, “ಸದಾ ಅಳತೆಯಿಲ್ಲದ ಮಾತು
ಮಾತನಾಡುವ ಪ್ರಿಯಾಂಕ್ ಖರ್ಗೆಯವರ ಮಾತುಗಳು ಬಾಲಿಶ ಸ್ವರೂಪದ್ದಾಗಿವೆ. ದೇಶದ ಅತಿದೊಡ್ಡ ಕಾರ್ಯಕರ್ತ ಆಧಾರಿತ ಪಕ್ಷವಾದ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುವುದು ಸಮಂಜಸವಲ್ಲ” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ, ರಾಷ್ಟ್ರವನ್ನು ಬಲಿಷ್ಠಗೊಳಿಸುವ ಆಂದೋಲನವೆಂದು ಅವರು ವಿವರಿಸಿ, “ಜಾಗತಿಕ ರಾಜಕೀಯದಲ್ಲಿ ಭಾರತದ ಪ್ರಭಾವ ಇಂದು ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಅಸಂಗತ” ಎಂದರು.
ಕಲ್ಯಾಣ ಕರ್ನಾಟಕದ ಹಿಂದುಳಿತಕ್ಕೆ ಕಾರಣಗಳನ್ನು ಉಲ್ಲೇಖಿಸಿದ ಹಾಲಕಾಯಿ, “ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯ, ಶಿಕ್ಷಣ, ಕೈಗಾರಿಕೆ ಎಲ್ಲ ಕ್ಷೇತ್ರಗಳಲ್ಲೂ ಈ ಭಾಗ ಹಿಂದುಳಿದಿದೆ. ನಂಜುಂಡಪ್ಪ ಸಮಿತಿ ಶಿಫಾರಸುಗಳನ್ನೂ ಗಾಳಿಗೆ ತೂರಿದ್ದು ಇದೇ ಕುಟುಂಬ. 371(ಜೆ) ಜಾರಿಗೆ ತಂದ ಬಳಿಕವೂ ಅಭಿವೃದ್ಧಿ ತರಲು ಇವರು ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.
ಪ್ರದೇಶದ ಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಜನರ ಹಿತವನ್ನು ಕಡೆಗಣಿಸಿರುವುದರಿಂದ ಸಾಮಾನ್ಯರು ಬೇರೆಡೆಗೆ ವಲಸೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. “ಪ್ರಿಯಾಂಕ್ ಖರ್ಗೆಯವರು ಮುಂದಿನ ದಿನಗಳಲ್ಲಿ ವಿವೇಕಪೂರ್ಣವಾಗಿ ನಡೆದುಕೊಳ್ಳಲಿ ಎಂಬುದು ನನ್ನ ಹಾರೈಕೆ” ಎಂದು ಹಾಲಕಾಯಿ ಪ್ರಕಟಣೆಯಲ್ಲಿ ತಿಳಿಸಿದರು.