ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ.ನಿಮಗಾಗಿ ಓದದವರು ಒಮ್ಮೆ ಓದಿ

.ತನಾರತಿ ಪತ್ರಿಕೆಯಲ್ಲಿ ಖ್ಯಾತ ಸೃಜನಶೀಲ ದಾರ್ಶನಿಕ ಲೇಖಕರಾದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಗಜಲ್ ಕೃತಿಗಳ ಬಿಡುಗಡೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗಜಲ್ ಸಾಹಿತ್ಯ ಕುರಿತು ಮಾತಾಡಿದ್ದು ಬಹು ವಿಶಿಷ್ಟವಾಗಿದೆ. ನನಗಾಗಿ ಅಲ್ಲ.ನಿಮಗಾಗಿ ಓದದವರು ಒಮ್ಮೆ ಓದಿ
ಕೊರೋನಾದ ಮೊದಲನೆಯ ಅಲೆ ಮುಗಿದು ಲಾಕ್ ಡೌನ್ ಕೆಲವು ದಿನ ತೆರವಾದ ಸಂದರ್ಭದಲ್ಲಿ ಬೇಸಗೆಯ ಬಿರು ಬಿಸಿಲಿನ ನಡುವೆ ಶಹಾಪೂರದಲ್ಲಿ ಒಂದು ಅಪ್ಯಾಯಮಾನವಾದ ಸುಂದರವಾದ ಸಮಾರಂಭವೊಂದು ಜರುಗಿತು. ಅದು ಶ್ರೀಮಠದ ಆತ್ಮೀಯ ಸಾಹಿತಿಗಳಾದ ಸಾಹಿತ್ಯ ಕ್ಷೇತ್ರದಲ್ಲಿ ಅದರ ವಿವಿಧ ಬಗೆಯ ಸಾಹಿತ್ಯ ಕೃಷಿ ಮಾಡಿದ ಶ್ರೀ ಸಿದ್ದರಾಮ ಹೊನ್ಕಲ್ ರವರ ಮೂರು ಗಜಲ್ ಪುಸ್ತಕಗಳ ಬಿಡುಗಡೆ ಸಮಾರಂಭ ಅದಾಗಿತ್ತು. ಶ್ರೀ ಸಿದ್ದರಾಮ ಹೊನ್ಕಲ್ ರವರ ತಂದೆಯವರಾದ ಲಿಂ. ಶ್ರೀ ಶರಣಬಸಪ್ಪ ಹೊನ್ಕಲ್ ರವರು ಶ್ರೀಮಠದ ಹಳೆಯ ಹಾಗೂ ಹಿರಿಯ ಸದ್ಭಕ್ತರಲ್ಲಿ ಒಬ್ಬರಾಗಿದ್ದರು. ಅವರು ಅಂದಿನ ದಿನಗಳಲ್ಲಿ ಪ್ರತಿ ತಿಂಗಳು ಬೆಳಗಿನ ಜಾವದವರೆಗೂ ನೆರವೇರುತ್ತಿದ್ದ ಶ್ರೀಮಠದ ಮಾಸಿಕ (ಅಮಾವಾಸ್ಯೆಗೊಮ್ಮೆ) ಶಿವಾನುಭವ ಚಿಂತನ ಸಭೆಗಳಲ್ಲಿ ರಾತ್ರಿಯಿಡೀ ಪಾಲ್ಗೊಳ್ಳುತ್ತಿದ್ದರು ಅವರೊಂದಿಗೆ ಅವಿಭಕ್ತ ಕಲಬುರ್ಗಿ - ಯಾದಗಿರಿ ಜಿಲ್ಲೆಗಳಲ್ಲಿ ಪಾರ್ಶ್ವವಾಯು ಪೀಡಿತರಿಗೆ, ರೋಗಿಗಳಿಗೆ ಔಷಧ ನೀಡುವಲ್ಲಿ ಸಿದ್ಧ ಹಸ್ಥರಾಗಿದ್ದ, ಈ ಭಾಗದ ಧನ್ವಂತರಿಯಂತಿದ್ದ ರಸ್ತಾಪೂರದ ಶರಬಣ್ಣ ಗೌಡರು ಹಾಗೂ ಸನ್ನತಿಯ ಶ್ರೀ ಶರಣಪ್ಪ ಗೌಡರು, ಸಮೀಪದ ಕನಗನಹಳ್ಳಿಯ ಶ್ರೀ ಚಂದಣ್ಣ ಗೌಡರು ಮುಂತಾದವರು ಶಿವಾನುಭವ ಚಿಂತನಗೋಷ್ಠಿಗಳ ಶ್ರೋತೃಗಳಾಗಿ ಬೆಳಗಿನ ಜಾವದವರೆಗೂ ಭಾಗವಹಿಸುತ್ತಿದ್ದರು. ಒಂದು ವೇಳೆ ಆ ಕಾರ್ಯಕ್ರಮ ಬೇಗ ಮುಗಿದರೆ ಅವರಿಗೆ ಬೇಸರವಾಗುತ್ತಿತ್ತು ಏಕೆಂದರೆ ಬೆಳಗಿನವರೆಗೂ ಶಿವಾನುಭವದ ಜಾಗರಣೆಯಾಗಬೇಕು ಬೆಳಿಗ್ಗೆ ಬಸ್ಸು ಹಿಡಿದು ತಮ್ಮ ತಮ್ಮ ಊರುಗಳಿಗೆ ತೆರಳಬೇಕು ಎನ್ನುವ ಮನೋಭಾವದವರಾಗಿದ್ದರು. ಇವರೊಂದಿಗೆ ತನಾರತಿ ಪತ್ರಿಕೆಯ ಈ ಮೊದಲಿನ ಸಂಪಾದಕರಾಗಿದ್ದ ಶ್ರೀ ಬಿ. ಮಹಾದೇವಪ್ಪ ನವರು, ಗುರುಭಕ್ತಿ ಕಂಠೀರವರೆಂದೇ ಪ್ರಸಿದ್ಧರಾಗಿದ್ದ ಶಹಾಬಾದದ ಶ್ರೀ ಬಿ.ಎಸ್.ಭರಮಶೆಟ್ಟಿ ಯವರು, ಸನ್ನತಿಯ ಧೂಳಪ್ಪ ಮೇಷ್ಟ್ರು, ಲಿಂಗಣಗೌಡ ಕೊಲ್ಲೂರು ಮುಂತಾದವರೆಲ್ಲ ಸೇರಿರುತ್ತಿದ್ದರು. ಬೆಳಗಿನವರೆಗೂ ಶಿವಾನುಭವ ಶ್ರವಣ ಮಾಡಿ ಅನೇಕ ಶರಣರ, ಸಂತರ ತತ್ವಗಳ ಬಗ್ಗೆ ಚರ್ಚೆ ಮಾಡಿ ಒಂದಿಷ್ಟೂ ನಿದ್ರಿಸದೇ ಮುಂಜಾನೆ ತಮ್ಮ ತಮ್ಮ ಊರುಗಳಿಗೆ ಪಯಣಿಸುತ್ತಿದ್ದ ಆ ಹಿರಿಯ ಜೀವಿಗಳ ಬಗ್ಗೆ ನಮಗೆ ಆಶ್ಚರ್ಯ ಉಂಟಾಗುತ್ತಿತ್ತು. ಅವರ ಗುಂಪಿನಲ್ಲಿ ಶ್ರೀ ಶರಣಬಸ್ಸಪ್ಪ ಹೊನ್ಕಲ್ ರವರು ಪ್ರಮುಖರಾಗಿರುತ್ತಿದ್ದರು ಅನ್ನುವುದೇ ಒಂದು ಹೆಮ್ಮೆ.
ಇಂಥವರ ಸುಪುತ್ರರಾಗಿ ನಮ್ಮ ಭಾಗದ ಹೆಮ್ಮೆಯ ಸಾಹಿತಿಗಳಾಗಿ ಸಂಪರ್ಕಕ್ಕೆ ಬಂದವರು ಶ್ರೀ ಸಿದ್ದರಾಮ ಹೊನ್ಕಲ್ ರವರು. ಅವರ ಯಶಸ್ಸಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂಥ ಅವಕಾಶ ಕೂಡ ನಮಗೆ ದೊರಕಿತ್ತು. ಅವರು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವಕ್ಕೆ ಪಾತ್ರರಾದ ಸಂದರ್ಭದಲ್ಲಿ ಆ ಯಾದಗಿರಿಯ ಕಾರ್ಯಕ್ರಮದ ಹಾಗೂ ಶಹಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶಹಾಪುರದ ಆ ಎರಡೂ ಕಾರ್ಯಕ್ರಮಗಳ ಸಾನಿಧ್ಯ ವಹಿಸುವ ಸಂದರ್ಭ ನಮ್ಮದಾಗಿತ್ತು. ಇಷ್ಟೆಲ್ಲಾ ಸಂಬಂಧಗಳ ನಡುವೆ ಅವರು ತಮ್ಮ ಮೂರು ಹೊಸ ಪುಸ್ತಕಗಳಾದ ಗಜಲ್ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದಾಗ ಒಲ್ಲೆ ಎನ್ನದೆ ಒಪ್ಪಿಕೊಂಡು ಬಿಟ್ಟಿದ್ದೆವು ಆದರೆ ಆನಂತರ ಅನ್ನಿಸಿತು ಗಜಲ್ ಸಾಹಿತ್ಯದ ಬಗ್ಗೆ ಒಬ್ಬ ಮಠಾಧೀಶರು ಏನನ್ನು ಹೇಳಲು ಸಾಧ್ಯ? ಎಂದು. ಏಕೆಂದರೆ ಗಜಲ್ ಸಾಹಿತ್ಯ ಎಂದರೆ ಪ್ರೇಮ ಮತ್ತು ಮದಿರೆಯ ಸಾಹಿತ್ಯವೆಂದೆ ಜನ ಜನಿತವಾಗಿರುವಾಗ ನಾವು ಅಲ್ಲಿ ಏನನ್ನು ಹೇಳಲು ಸಾಧ್ಯ? ಎಂದು ಯೋಚಿಸಿದೆವು. ಭಕ್ತಿಪಂಥದ ಧಾರ್ಮಿಕತೆಯ ವಕ್ತಾರರಾದ ನಾವು ಧಾರ್ಮಿಕ ವಿಷಯವನ್ನು ಬಿಟ್ಟು ಲೌಕಿಕ ವಿಷಯಗಳನ್ನು ಹೇಳಲು ಸಾಧ್ಯವೇ? ಎಂದು ಆಲೋಚಿಸಿದೆವು.
ಯಾವುದೇ ಒಂದು ಬಗೆಯ ಸಾಹಿತ್ಯಕ್ಕೆ ಮಿತಿ ಎನ್ನುವುದು ಇರುವುದಿಲ್ಲ. ಅದು ಒಬ್ಬ ತೋಟದ ಆ ಮಾಲೀಕನ ತೋಟದಲ್ಲಿ ಅರಳಿದ ಹೂವಾಗಿರಬಹುದು ಆ ಹೂವನ್ನು ಯಾರು ಕದ್ದೊಯ್ಯಬಾರದೆಂದು ಆ ತೋಟದ ಮಾಲೀಕ ತೋಟದ ಸುತ್ತಲೂ ಬೇಲಿಯನ್ನು ಹಾಕಿಸಿರಬಹುದು ಅಥವಾ ಕಾವಲುಗಾರರನ್ನು ನೇಮಿಸಿರಬಹುದು ಆದರೆ ಆ ಬೇಲಿಯ ಕಟ್ಟಳೆ, ಕಾವಲುಗಾರರ ಕಟ್ಟಳೆ ಅದು ಬರೀ ಆ ಹೂವಿಗೆ ಮಾತ್ರ ಸೀಮಿತ, ಆದರೆ ಆ ಹೂವಿನ ಅಂತರಂಗದಲ್ಲಿರುವ ಸುಗಂಧಕ್ಕೆ, ಸೌರಭಕ್ಕೆ ಆ ಬೇಲಿಯ ಕಟ್ಟಳೆಯಾಗಲಿ, ಕಾವಲುಗಾರರ ಕಾವಲುತನವಾಗಲಿ ಅನ್ವಯಿಸುವುದಿಲ್ಲ. ನಿಯಮಗಳನ್ನು ಮೀರಿ ಹೂವನ್ನು ಯಾರೂ ಕದ್ದೊಯ್ಯದೆ ಇರಬಹುದು ಆದರೆ ಬೇಲಿ ಕಾವಲುಗಾರರನ್ನು ಮೀರಿ ಹೂವಿನ ಸೌರಭ ಎಲ್ಲಾ ಕಡೆ ಪಸರಿಸಿ ತೋಟದ ಆಚೆ ಇರುವವರನ್ನು ಕೂಡ ತಲುಪಬಲ್ಲದು. ಆಘ್ರಾಣಿಸುವಂತೆ ಮಾಡಬಲ್ಲದು ಹಾಗೆಯೇ ಯಾವುದೇ ಒಂದು ಪ್ರಕಾರದ ಸಾಹಿತ್ಯವು ಒಂದು ದೇಶದಲ್ಲಿ ಅಥವಾ ಒಂದು ನಾಡಿನಲ್ಲಿ ಮತ್ತು ಒಂದು ಜನಾಂಗದಲ್ಲಿ ಹುಟ್ಟಿ ಬೆಳೆದುಕೊಂಡು ಬಂದಿರಬಹುದು ಆದರೆ ಅದರ ಜನಪ್ರಿಯತೆಗೆ ಪ್ರಸರಣಕ್ಕೆ ಅವರು ಮಾತ್ರ ಒಡೆಯರಾಗಿರುವುದಿಲ್ಲ ಅದು ದೇಶ, ಭಾಷೆ, ನಾಡು, ನುಡಿ, ಗಡಿಗಳನ್ನು ಮೀರಿ ಬೆಳೆಯಬಲ್ಲದು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಗಜಲ್ ಸಾಹಿತ್ಯ. ಯಾವುದೇ ಒಂದು ಬಗೆಯ ಸಾಹಿತ್ಯ ಸರ್ವಾಂತರ್ಯಾಮಿಯಾಗಿ ನಿಲ್ಲಬಹುದು ಎನ್ನುವುದಕ್ಕೆ ಈ ಗಜಲ್ ಸಾಹಿತ್ಯವು ಸಾಕ್ಷಿಯಾಗಿದೆ. ಇದು ಅರಬ್ ದೇಶದ ಮೂಲದಿಂದ ಬಂದ ಪ್ರಕಾರವಾಗಿದ್ದರೂ ಇದು ಅರೇಬಿಕ್, ಪಾರ್ಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಅದನ್ನು ಬಲ್ಲವರು.
ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯದ ರೂಪವಾಗಿದೆ ಇದನ್ನು "ಉರ್ದು ಕಾವ್ಯದ ರಾಣಿ" ಎಂದು ಕರೆಯುತ್ತಾರೆ ಇದು ಕನ್ನಡದಲ್ಲಿ ರಚನೆಗೊಂಡು ಜನಪ್ರಿಯವಾಗಲು ಮುಖ್ಯ ಕಾರಣೀಭೂತರಾದವರು ನಮ್ಮ ಇಂದಿನ ಕಲ್ಯಾಣ ಕರ್ನಾಟಕದ ಅಂದಿನ ಹೈದ್ರಾಬಾದ್ ಕರ್ನಾಟಕದ ರಾಯಚೂರಿನ ಹೆಮ್ಮೆಯ ಸಾಹಿತಿಗಳಾದ ಶ್ರೀ ಶಾಂತರಸರವರು, ಅವರು ಈ ಸಾಹಿತ್ಯ ಪ್ರಕಾರದ ಬಗ್ಗೆ ಹೀಗೆ ಹೇಳುತ್ತಾರೆ "ಗಜಲ್ ಉರ್ದು ಕಾವ್ಯದ ಕೆನೆ ಘನತೆ, ಗೌರವ ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞೆ ರಸಜಲದಿ ಬದುಕಿನ ರುಚಿ ಮತ್ತು ಬಟ್ಟೆ ಅಷ್ಟೆ ಅಲ್ಲ ಅದು ಆತ್ಮಾನಂದದ ತಂಬೆಳಕು" ಎಂದು. ಗಜಲ್ ಸಾಹಿತ್ಯದ ಬಗ್ಗೆ ಅಭ್ಯಶಿಸುತ್ತ ಹೋದಂತೆ ಅರಿವಾಗುವ ವಿಷಯವೆಂದರೆ ಇದು ಕೇವಲ ಲೌಕಿಕವಾದ ಪ್ರೇಮ ಮತ್ತು ನಶೆಯ ಸಾಹಿತ್ಯವಲ್ಲವೆಂದು ಅದು ಅಲೌಕಿಕವಾದ ಭಕ್ತ ಮತ್ತು ಭಗವಂತನ ನಡುವೆ ಇರುವ ಭಕ್ತಿ ಮತ್ತು ಪ್ರೇಮಗಳ ಸಾಹಿತ್ಯವೂ ಕೂಡ ಹೌದು ಎನ್ನುವ ವಿಷಯ ಗಮನಕ್ಕೆ ಬರುತ್ತದೆ. ಹನ್ನೆರಡನೇ ಶತಮಾನದ ನಮ್ಮ ಶರಣರು ಸಾರಿದ ಶರಣಸತಿ ಲಿಂಗಪತಿ ಎನ್ನುವ ಭಾವ ಇಲ್ಲಿ ವ್ಯಕ್ತವಾಗಿರುವುದು ಗೋಚರವಾಗುತ್ತದೆ. ಭಾರತದ ಮೀರಾಬಾಯಿ ಶ್ರೀ ಕೃಷ್ಣನನ್ನೆ ತನ್ನ ಪತಿಯೆಂದು ಭಾವಿಸಿ ಪೂಜಿಸಿದ, ಅರ್ಚಿಸಿದ, ಕವಿತೆಗಳನ್ನು ಹಾಡಿ ರಚಿಸಿದ ಸಂದರ್ಭಗಳು ನೆನಪಾಗುತ್ತವೆ. ಮಹಾಶಿವಶರಣೆ ಅಕ್ಕಮಹಾದೇವಿ ತಾಯಿಯು ಕೂಡ ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯೆಂದು ಭಾವಿಸಿ "ಸಾವಿಲ್ಲದ ಕೇಡಿಲ್ಲದ, ರೂಹಿಲ್ಲದ ಚೇಲುವಂಗಾನೊಲಿದೆ" ಎನ್ನುವ ವಚನದಂತೆ ಗಜಲ್ ಸಾಹಿತ್ಯದಲ್ಲೂ ಕೂಡ ಭಗವಂತನಿಗಾಗಿ ಹಂಬಲಿಸಿ, ಪ್ರೇಮಿಸಿ, ದೇವನ ನಷೆಯನ್ನು ಏರಿಸಿಕೊಂಡು ಗಜಲ್ ಗಳನ್ನು ಬರೆದವರಿರಬೇಕಲ್ಲವೇ? ಏಕೆಂದರೆ ಗಜಲ್ ಸಾಹಿತ್ಯ ಪ್ರಕಾರವು ಹಿಂದೆ ರಾಜಾಶ್ರಯದಲ್ಲಿ ಬೆಳೆದು ಬಂದಂತೆ ಅದು ಅನೇಕ ಸೂಫಿ ಸಂತರ ಆಶ್ರಯದಲ್ಲೂ ಕೂಡ ಬೆಳೆದುಬಂದಿದೆ ಎನ್ನುವ ಉದಾಹರಣೆಗಳು ದೊರೆಯುತ್ತವೆ.
ಉರ್ದು ಕಾವ್ಯ ಪ್ರಕಾರವನ್ನು ರಾಜರ ಆಸ್ಥಾನದಿಂದ ಮುಕ್ತಗೊಳಿಸಿ ಸಾಮಾನ್ಯ ಜನರೆಡೆಗೆ ತರುವುದರಲ್ಲಿ ಸೂಫಿ ಸಂತ ಕವಿಗಳು ಬಹುಮುಖ್ಯ ಕೊಡುಗೆಯನ್ನು ನೀಡಿದ್ದಾರೆ. ಸರಳ ಗಜಲ್ ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಶ ಬದುಕಿನ ವಿವಿಧ ಆಯಾಮವನ್ನು, ಆಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಸೂಫಿ ಕವಿಗಳು ಜನಪ್ರಿಯಗೊಳಿಸಿದ್ದಾರೆ ಅವರಲ್ಲಿ ಮುಖ್ಯವಾಗಿ ಗುರುತಿಸಲ್ಪಡುವವರೆಂದರೆ ಅಮೀರ್ ಖುಸ್ರೋ, ಮೀರ್ ತಖಿ ಮೀರ್ ಮತ್ತು ಇನ್ನೊಬ್ಬ ಬಹುಮುಖ್ಯ ಕವಿ ಮಿರ್ಜಾ ಗಾಲಿಬ್ ಕೂಡಾ ಸೇರುತ್ತಾರೆ. ಇಂಥ ಪ್ರಮುಖ ಸಾಹಿತ್ಯ ಪ್ರಕಾರವಾದ ಗಜಲ್ ಸಾಹಿತ್ಯದ ಮೂರು ಕೃತಿಗಳನ್ನು ಸಾಹಿತಿ ಶ್ರೀ ಸಿದ್ದರಾಮ ಹೊನ್ಕಲ್ ರವರು ಹೊರತಂದಿದ್ದು ಅವು "ನಿನ್ನ ಪ್ರೇಮವಿಲ್ಲದೇ ಸಾಕಿ", "ಹೊನ್ನ ಮಹಲ್", ಹಾಗೂ "ಆಕಾಶಕ್ಕೆ ಹಲವು ಬಣ್ಣಗಳು" ಎನ್ನುವ ಮೂರು ಕೃತಿಗಳು ಲೋಕಾರ್ಪಣೆಗೊಂಡವು.
ಶಹಾಪುರದ ಶ್ರೀ ಸಿದ್ದರಾಮ ಹೊನ್ಕಲ್ ರವರ ಮನೆ ಕಾವ್ಯಾಲಯದ ಅಂಗಳದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ದಯಾನಂದ್ ರವರು ಹೊನ್ಕಲ್ ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಿದರೆ, ಕಲಬುರ್ಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕಲಾನಿಕಾಯದ ಡೀನ್ ಆದ ಪ್ರೋ. ಹೆಚ್. ಟಿ. ಪೋತೆ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ಶಹಾಪುರ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಶ್ರೀ ವೇ.ಬಸವಯ್ಯ ಶರಣರು, ಖ್ಯಾತ ವೈದ್ಯರಾದ ಡಾ.ಚಂದ್ರಶೇಖರ್ ಸುಬೇದಾರ್ ಸಗರ ಮುಂತಾದವರು ಭಾಗವಹಿಸಿದ್ದ ಸಮಾರಂಭದಲ್ಲಿ ಸ್ಥಳೀಯ ಉದ್ಯಮಿ ಶ್ರೀ ಚಂದ್ರಶೇಖರ್ ಅರಬೋಳ ಶಹಾಪುರ ಅಧ್ಯಕ್ಷತೆಯನ್ನು ವಹಿಸಿದ್ದರೆ, ಕಲಬುರ್ಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಅಧ್ಯಾಪಕರು ಹಾಗೂ ಖ್ಯಾತ ಲೇಖಕರು ಆದ ಡಾ.ವಿಕ್ರಮ್ ವಿಸಾಜಿ ಹಾಗೂ ವಿಜಯಪುರದ ಖ್ಯಾತ ಲೇಖಕಿ ಶ್ರೀಮತಿ ಹೇಮಲತಾ ವಸ್ತ್ರದ ಕೃತಿಗಳನ್ನು ಕುರಿತು ಮಾತನಾಡಿದ ಈ ಸಂದರ್ಭದಲ್ಲಿ ನಮ್ಮ ಸಂದೇಶದ ಸದಾಶಯ ಹೀಗಿತ್ತು,
*ಗಜಲ್ ಸಾಹಿತ್ಯ ಎನ್ನುವುದು ಉತ್ಕೃಷ್ಟ ಪ್ರೇಮದ ಪರಾಕಾಷ್ಠೆ ಈ ಪ್ರೇಮವೆನ್ನುವುದು ಕೇವಲ ಮೋಹ ಸೂಚಕವಲ್ಲ. ಅದು ಪತಿ ಪತ್ನಿಯರ ಮಧ್ಯದಲ್ಲಿ ಮೋಹ, ವ್ಯಾಮೋಹ ಅನ್ನಿಸಬಹುದು ಅದೇ ಪ್ರೇಮ ತಂದೆ ತಾಯಂದಿರು ತಮ್ಮ ಮಕ್ಕಳ ಮೇಲೆ ತೋರಿದಾಗ ಅದು ಮಮತೆ, ವಾತ್ಸಲ್ಯವೆಂದೆನಿಸಬಹುದು ಅದೇ ಪ್ರೇಮ ಸಹೋದರ ಸಹೋದರಿಯರ ನಡುವೆ ಅಕ್ಕರೆ ಎಂದೆನಿಸಿಬಹದು. ಅದೇ ಪ್ರೇಮವನ್ನು ಭಕ್ತನು ಭಗವಂತನ ಮೇಲೆ ಇರಿಸಿದಾಗ ಅದು ಅತ್ಯಂತ ಪರಾಕಾಷ್ಟತೆಯನ್ನು ತಲುಪಿ ಭಕ್ತಿ ಎಂದೆನಿಸಬಹುದು. ಎಲ್ಲ ಶಿಕ್ಷಣ ಸಾಹಿತ್ಯದ ಕೊನೆಯ ಹಂತ ಧಾರ್ಮಿಕತೆಯೇ ಆಗಿದೆ ಈ ದಿಸೆಯಲ್ಲಿ ಗಜಲ್ ಸಾಹಿತ್ಯದ ಕೊನೆಯ ಪರಾಕಾಷ್ಠತೆ ಅದೇ ಆಗಿರಬಹುದಲ್ಲವೇ?* ಎಂದು ಹೇಳಿದೆವು.
ದಿ. 21.03.2021 ರಂದು ಮುಂಜಾನೆಯಿಂದ ಮಧ್ಯಾಹ್ನದವರೆಗೂ ನಡೆದ ಈ ಗಜಲ್ ಪುಸ್ತಕಗಳ ಬಿಡುಗಡೆ ಸಮಾರಂಭ ಕೊರೋನಾ ಬಿಡುವಿನ ನಡುವೆ ಮಾರ್ಚ್ ತಿಂಗಳ ಬಿರು ಬಿಸಿಲಿನಲ್ಲೂ ಒಂದು ಅಪ್ಯಾಯಮಾನವಾದ ಸಮಾರಂಭವಾಗಿ ನಡೆದದ್ದಂತು ನಿಜ.
ಇತಿ ಅನಂತ ಆಶಿಷಃ*ಡಾ.ಸಿದ್ಧ ತೋಟೇಂದ್ರ ಶ್ರೀಗಳು,ನಾಲವಾರ.*