ಮಲ್ಲಿಕಾರ್ಜುನ ತರುಣ ಸಂಘದ ೨೯ನೇ ವಾರ್ಷಿಕೋತ್ಸವ ಹಾಗೂ ಕಾಮದಹನ ಕಾರ್ಯಕ್ರಮ ಮಾರ್ಚ್ ೩ರಂದು
ಮಲ್ಲಿಕಾರ್ಜುನ ತರುಣ ಸಂಘದ ೨೯ನೇ ವಾರ್ಷಿಕೋತ್ಸವ ಹಾಗೂ ಕಾಮದಹನ ಕಾರ್ಯಕ್ರಮ ಮಾರ್ಚ್ ೩ರಂದು
ಕಲಬುರಗಿ: ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೯ನೇ ವಾರ್ಷಿಕೋತ್ಸವ ಹಾಗೂ ಕಾಮದಹನ ಕಾರ್ಯಕ್ರಮವನ್ನು ವಿದ್ಯಾನಗರ ವೆಲ್‌ಫೆರ್ ಸೊಸೈಟಿ ಆಶ್ರಯದಲ್ಲಿ ಮಾರ್ಚ್ ೩ರಂದು ಸಾಯಂಕಾಲ ೭.೩೦ಕ್ಕೆ ಮಲ್ಲಿಕಾರ್ಜುನ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಂದಿನ ಯುವ ಪೀಳಿಗೆ ಹೋಳಿ ಹಬ್ಬದ ನಿಜವಾದ ಸಾಂಸ್ಕೃತಿಕ ಅರ್ಥವನ್ನು ಮರೆಯುತ್ತಿರುವ ಹಿನ್ನೆಲೆಯಲ್ಲಿ ಹಬ್ಬದ ಹಿರಿಮೆ-ಗರಿಮೆ ಹಾಗೂ ಸಂಪ್ರದಾಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವೇದಿಕೆಯಲ್ಲಿ ಈವರೆಗೆ ಅನೇಕ ಹಿರಿಯ ಸಾಹಿತಿಗಳು ಹಾಗೂ ಕಲಾವಿದರು ಉಪನ್ಯಾಸ ನೀಡಿ ಅನುಭವ ಹಂಚಿಕೊಂಡಿದ್ದಾರೆ. ಈ ವರ್ಷ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅವರು “ಕಾಮದಹನ ಸುಡಿ, ದುರಾಸೆಯ ಭಾವ ಬಿಡಿ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಜಗತ್ ಬಡಾವಣೆಯ ಬಯಲಾಟ ಕಲಾವಿದ ಅಶೋಕ ಕಾಳೆ ಅವರು ಹೋಳಿ ಹಬ್ಬದ ವಿಶೇಷ ಹಾಡುಗಳನ್ನು ಹಾಡಲಿದ್ದಾರೆ. ಕಲಾವಿದ ವಿಶ್ವನಾಥ ತೋಟ್ನಳ್ಳಿ ಅವರಿಂದ ವಿಶೇಷವಾಗಿ ಪೋತರಾಜ ನೃತ್ಯ ಪ್ರದರ್ಶನ ನಡೆಯಲಿದೆ.
ವೆಲ್‌ಫೆರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ ಹಾಗೂ ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ತರುಣ ಸಂಘದ ಪದಾಧಿಕಾರಿಗಳಿಂದ ಕಾಮದಹನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಘದ ಸದಸ್ಯರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
