ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ಸಮೀಕ್ಷಾ ವರದಿಯನ್ನು ತಕ್ಷಣ ಪ್ರಕಟಿಸಿ ಮತ್ತು ಅನುಷ್ಠಾನಗೊಳಿಸಿ: ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹ

ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ್ ಸಮೀಕ್ಷಾ ವರದಿಯನ್ನು ತಕ್ಷಣ ಪ್ರಕಟಿಸಿ ಮತ್ತು ಯಥಾವತ್ತಾಗಿ ಅನುಷ್ಠಾನಗೊಳಿಸಿ – ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮಹಾ ಒಕ್ಕೂಟ
ಕಲಬುರ್ಗಿ, ದಿನಾಂಕ: 15-ಏ.ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಆಶಯದಂತೆ, ಜಗಜ್ಯೋತಿ ಬಸವೇಶ್ವರರ ಸಮ ಸಮಾಜದ ತತ್ವದಂತೆ, ಹಿಂದುಳಿದ ಮತ್ತು ಶೋಷಿತ ಸಮುದಾಯಗಳಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ, ಹಿರಿಯ ನ್ಯಾಯವಾದಿ ಎಚ್. ಕಾಂತರಾಜ್ ಅವರ ನೇತೃತ್ವದಲ್ಲಿ ರಚನೆಯಾದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ತಕ್ಷಣ ಸಚಿವ ಸಂಪುಟದಲ್ಲಿ ಅನುಮೋದಿಸಿ, ಅದನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂಬುದು ನಮ್ಮ ಬಲವಾದ ಆಗ್ರಹವಾಗಿದೆ.
ಈ ವರದಿ ಅತ್ಯಂತ ವೈಜ್ಞಾನಿಕವಾಗಿ, ರಾಜ್ಯದ ಪ್ರತಿಯೊಂದು ಮನೆಗೆ ತಲುಪಿದ ಸಮೀಕ್ಷೆಯಾಗಿ ರೂಪುಗೊಂಡಿದ್ದು, 1 ಕೋಟಿ 27 ಲಕ್ಷ ಮನೆಗಳಿಗೆ ಭೇಟಿ ನೀಡಿ, 54 ಅಂಶಗಳನ್ನು ಒಳಗೊಂಡು ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಗೆ ₹163 ಕೋಟಿ ವೆಚ್ಚವಾಗಿ, ಪ್ರಾಮಾಣಿಕವಾಗಿ ಎಲ್ಲಾ ಜಾತಿಗಳಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಸಮೀಕ್ಷೆ ಪ್ರಜಾಪ್ರಭುತ್ವದ ಶ್ರೇಷ್ಠ ಉದಾಹರಣೆ ಎನ್ನಬಹುದಾಗಿದೆ.
ಆದರೆ ಇಂದು ಕೆಲವರು ಈ ಸಮೀಕ್ಷೆಯನ್ನು ಅಡ್ಡಗಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಇತಿಹಾಸದಲ್ಲಿಯೇ ಹಿಂದುಳಿದ ವರ್ಗಗಳ ಹಕ್ಕುಗಳನ್ನು ತಿರಸ್ಕರಿಸಿದವರೇ ಆಗಿದ್ದಾರೆ. ಲೆಸ್ಲಿ ಮಿಲ್ಲರ್ ಸಮಿತಿ (1921), ನಾಗನಗೌಡ ಸಮಿತಿ (1960), ಹಾವನೂರ್ ವರದಿ (1972), ವೆಂಕಟಸ್ವಾಮಿ ಆಯೋಗ (1983), ಚಿನ್ನಪ್ಪ ರೆಡ್ಡಿ ಆಯೋಗ (1990), ಮಂಡಲ್ ಆಯೋಗ (1992) ಮುಂತಾದವುಗಳಿಗೂ ಇದೇ ತೊಂದರೆಯು ಎದುರಾಗಿತ್ತು.
ಆದರೆ ಇಂದಿನ ಜಾಗೃತ ಸಮಾಜ, ಪ್ರಜ್ಞಾವಂತ ಹೋರಾಟಗಾರರು, ಮುಖಂಡರು ಈ ವಿರೋಧಿ ಧೋರಣೆಯನ್ನು ಖಂಡಿಸುತ್ತಿದ್ದಾರೆ. ನಾವು ಕೇಳುತ್ತಿರುವದು ಕೇವಲ ಹಕ್ಕು. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಾದರೆ ಜಾತಿ ಆಧಾರಿತ ಜನಗಣತಿ ಹಾಗೂ ಸಮೀಕ್ಷಾ ವರದಿ ಅವಶ್ಯಕ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಈ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಘೋಷಣೆಯಲ್ಲಿ ತಿಳಿಸಿದ್ದಾರೆ. ಅದನ್ನು ನಿಭಾಯಿಸುವ ಮತ್ತು ಅನುಷ್ಠಾನಗೊಳಿಸುವ ನೈತಿಕ ಹೊಣೆಗಾರಿಕೆ ಪ್ರಸ್ತುತ ಸರ್ಕಾರದ ಮೇಲಿದೆ. ಡಾ. ದೇವರಾಜ ಅರಸು ನಂತರ ನೀವು ಈ ವರ್ಗಗಳಿಗೆ ನ್ಯಾಯ ಕೊಡಬಲ್ಲ ನಾಯಕ ಎಂದು ಇಡೀ ಅಹಿಂದ ಸಮುದಾಯ ನಂಬಿದೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂತರಾಜ್ ಸಮೀಕ್ಷಾ ವರದಿಯನ್ನು ತಕ್ಷಣ ಸಚಿವ ಸಂಪುಟದಲ್ಲಿ ಅನುಮೋದಿಸಿ, ಅದನ್ನು ಜಾರಿಗೆ ತರುವಂತೆ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಕಲಬುರ್ಗಿ ಜಿಲ್ಲಾ ಘಟಕದಿಂದ ವಿನಂತಿ ಮಾಡಲಾಗುತ್ತದೆ.**
ಮಹಾಂತೇಶ್ ಎಸ್. ಕೌಲಗಿ ಜಿಲ್ಲಾ ಅಧ್ಯಕ್ಷರು – ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಕಲಬುರ್ಗಿ ಹಾಗೂ ಶಿವಶರಣಪ್ಪ ಕೋಬಾಳ್, ಸುಭಾಷ್ ಪಂಚಾಳ್, ಬೈಲಪ್ಪ ನೆಲೋಗಿ, ಅರ್ಜುನ್ ಗೊಬ್ಬುರ್, ಬಸವರಾಜ್ ಬೂದಿಹಾಳ, ಪಿಡಪ್ಪ ಜಾಲಗರ್, ಭೀಮಶ್ಯಾ ಕನ್ನ, ರಮೇಶ್ ನಾಟಿಕರ್, ಈರಯ್ಯ ಗುತ್ತೇದಾರ್, ಹಣಮಯ್ಯ ಆಲೂರ್, ಮಲ್ಲಿಕಾರ್ಜುನ್ ಪೂಜಾರಿ, ಈರಣ್ಣ ಬಡಿಗೇರ್, ಸಾಯ್ಬಣ್ಣ ಹೇಳವರ್, ಕುಮಾರ್ ಯಾದವ್, ಶಿವಶರಣಪ್ಪ ಹಡಪದ್, ಸೂರ್ಯಕಾಂತ್ ಸವಿತಾ ಸಮಾಜ, ಅರುಣ್ ಕುಮಾರ್ ಕಟಬು, ಗಣಪತಿ ಇಟಗಿ.