ಸಂಭ್ರಮದ ಎಳ್ಳ ಅಮವಾಸ್ಯೆ : ಚೆರಗ ಚೆಲ್ಲಿ ಹಬ್ಬ ಆಚರಿಸಿದ ರೈತರು :.
ಸಂಭ್ರಮದ ಎಳ್ಳ ಅಮವಾಸ್ಯೆ : ಚೆರಗ ಚೆಲ್ಲಿ ಹಬ್ಬ ಆಚರಿಸಿದ ರೈತರು
ಶಹಾಬಾದ : - ಉತ್ತರ ಕರ್ನಾಟಕದ ಭಾಗದಲ್ಲಿ ಆಚರಿಸಲ್ಪಡುವ ಜಾನಪದ ಹಬ್ಬಗಳು ಅನೇಕ, ಅವುಗಳಲ್ಲಿ ಎಳ್ಳ ಅಮವಾಸ್ಯೆಯ ಸೋಮವಾರ ದಂದು ಮರತೂರ, ಭಂಕೂರ, ಗೋಳಾ, ಹೊನಗುಂಟಿ ಮತ್ತು ತೊನಸನಹಳ್ಳಿ ಗ್ರಾಮದ ಹಾಗೂ ಶಹಾಬಾದ ಸುತ್ತಮುತ್ತ ಗ್ರಾಮಗಳ ಸೀಮಿಯಲ್ಲಿ ಚೆರಗ ಚೆಲ್ಲುವ ಹಬ್ಬ ವಿಶಿಷ್ಟವಾಗಿ ಆಚರಿಸುವುದು ಕಂಡು ಬಂತು.
ಎಳ್ಳ ಅಮವಾಸ್ಯೆ ರೈತರ ಪಾಲಿಗೆ ಸಂಭ್ರಮದ ಹಬ್ಬ, ಎಳ್ಳು ಅಮವಾಸ್ಯೆ ದಿನ ರೈತರು, ರೈತ ಮಹಿಳೆಯರು ಮಕ್ಕಳು ಸೇರಿದಂತೆ ಮನೆ ಮಂದಿ ಚಕ್ಕಡಿ, ಟ್ರ್ಯಾಕ್ಟರ್ನಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ.
ರೈತ ಮಹಿಳೆಯರು ಬಗೆ, ಬಗೆಯ ಖಾದ್ಯ ಮಾಡಿಕೊಂಡು ಭೂತಾಯಿಗೆ ಪೂಜಿಸಿ, ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.
ಹೊಲಿಗೆ, ಎಳ್ಳು ಹಚ್ಚಿದ ರೊಟ್ಟಿ, ಸಜ್ಜಿ ರೊಟ್ಟಿ, ಎಳ್ಳು ಕಡುಬು, ಕಡಲೆಗಡುಬು, ಬದನೆಕಾಯಿ ಪಲ್ಲೆ, ಚಟ್ನಿಯಂತಹ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋಗಿ, ಬೆಳೆದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ 5 ಕಲ್ಲಿನ ಪಾಂಡವರು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಹುಲ್ಲು ಹುಲ್ಲಿಗೋ, ಚೆಲ್ಲ ಚೆಲ್ಲಂಬರಿಗೋ ಎಂದು ಹೇಳುತ್ತಾ ಖಾದ್ಯಗಳನ್ನು ಹೊಲದ ತುಂಬೆಲ್ಲಾ ಚರಗ ಚೆಲ್ಲುತ್ತಾರೆ.
ಮನೆ ಮಂದಿ ಜೊತೆಗೆ ಹೊಲ ಇಲ್ಲದವರನ್ನು ಕರೆದುಕೊಂಡು ಚರಗ ಚೆಲ್ಲಲು ಹೋಗುವುದು ಇನ್ನೊಂದು ವಿಶೇಷ, ಇನ್ನು ಚರಗ ಚೆಲ್ಲಿದ ಬಳಿಕ ಹೊಲದಲ್ಲಿ ಎಲ್ಲರೂ ಸೇರಿ ಸಹಭೋಜನ ಮಾಡುತ್ತಾರೆ.
ಚರಗ ಚೆಲ್ಲುವದರ ಹಿಂದಿದೆ ವೈಜ್ಞಾನಿಕ ಕಾರಣ :
ಎಳ್ಳು ಅಮವಾಸ್ಯೆಯ ಆಚರಣೆ ಹಿಂದೆ ವೈಜ್ಞಾನಿಕ ಕಾರಣವಿದೆ, ಎಳ್ಳ ಅಮವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ, ಅದ್ರಲ್ಲೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳ ಬಿದ್ದು ಹಾನಿ ಮಾಡುತ್ತವೆ, ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಜೋಳ, ಕಡಲೆಯನ್ನು ಹಿಂಗಾರು ಬೆಳೆಯಾಗಿ ರೈತರು ಬೆಳೆಯುತ್ತಾರೆ.
ಚರಗ ಚೆಲ್ಲಿದ ಖಾದ್ಯ ತಿನ್ನಲು ಹಕ್ಕಿಗಳು ಜೋಳ ಮಧ್ಯೆ ಕೆಳಗಿಳಿಯುತ್ತವೆ, ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿ ಕೊರಕ ಹುಳಗಳು ಕಣ್ಣಿಗೆ ಬೀಳುತ್ತವೆ. ಆಗ ಹಕ್ಕಿಗಳು ಕಾಯಿ ಕೊರಕದ ಹುಳುವನ್ನು ತಿನ್ನುತ್ತವೆ, ಇದರಿಂದ ಕಾಯಿ ಕೊರಕದ ಹುಳುಗಳ ನಿಯಂತ್ರಣವಾಗುತ್ತದೆ, ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ತಲಾಂತರದಿಂದ ಆಚರಣೆ ಮಾಡಲಾಗುತ್ತಿದೆ.
ತೊನಸನಹಳ್ಳಿ(ಎಸ) ಗ್ರಾಮದ ಬಸವರಾಜ ಮದ್ದರಕಿ ಅವರ ಹೊಲದಲ್ಲಿ ಚರಗ ಚೆಲ್ಲಿ ಮನೆ ಮಂದಿ ಮತ್ತು ಸ್ನೇಹಿತರ ಹಾಗೂ ಆತ್ಮೀಯರ ಜೊತೆ ಪ್ರೀತಿಯ ಸಹ ಭೋಜನ ಸವಿದರು.
ಈ ಸಂಧರ್ಭದಲ್ಲಿ ಶ್ರೀಮತಿ ಮಲ್ಲಮ್ಮ ಈರಣ್ಣ, ಮಲ್ಲಿಕಾರ್ಜುನ ಮದ್ದರಕಿ, ಸಂತೋಷ, ಮಲ್ಲಿಕಾರ್ಜುನ ನಾಟೀಕಾರ, ಬಸವರಾಜ ಮದ್ದರಕಿ, ನಾಗರಾಜ ದಂಡಾವತಿ ಲೋಹಿತ್ ಕಟ್ಟಿ,ಸೇರಿದಂತೆ ಕುಟುಂಬದವರು ಹಾಗೂ ಸ್ನೇಹಿತರು ಭಾಗವಹಿಸಿದರು.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ