ಕಷ್ಟ ಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ-ಬಿ.ಫೌಜಿಯಾ ತರನ್ನುಮ್
ಮಕ್ಕಳೊಂದಿಗೆ ಡಿ.ಸಿ. ಸಂವಾದ:
ಕಷ್ಟ ಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ-ಬಿ.ಫೌಜಿಯಾ ತರನ್ನುಮ್
ಕಲಬುರಗಿ: ಕಷ್ಟಪಟ್ಟು ಓದಿದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ನಿಮ್ಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ತೋರಿದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಮಂಗಳವಾರ ಚಿತ್ತಾಪುರ ತಾಲೂಕಿನ ಮಾಡಬೂಳ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ "ಸ್ಪೂರ್ತಿಯ ಕಿರಣ" ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಮಧ್ಯಮ ಕುಟುಂಬದಿಂದ ಬಂದಿರುವೆ. ನಮ್ಮನ್ನೆಯಲ್ಲಿ ಯಾರು ಸರ್ಕಾರಿ ನೌಕರಿಯಲ್ಲಿರಲಿಲ್ಲ. ಕಷ್ಟು ಪಟ್ಟು ಓದಿದ ಪರಿಣಾಮ ಐ.ಎ.ಎಸ್ ಅಧಿಕಾರಿಯಾಗಿರುವೆ ಎಂದು ತಮ್ಮ ಬದುಕಿನ ಪುಟ ಮಕ್ಕಳಲ್ಲಿ ತೆರೆದಿಟ್ಟ ಅವರು, ನೀವು ಸಹ ಛಲ, ಕಷ್ಟಪಟ್ಟು ಅಭ್ಯಾಸ ಮಾಡಿದಲ್ಲಿ ಯಶ ಸಾಧ್ಯ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಸ್ಪೂರ್ತಿ ತುಂಬಿದರು.
ಪರೀಕ್ಷೆಗೆ ಹೆದರಬೇಡಿ:
ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆಹೆದರುವ ಮನಸ್ಥಿತಿ ಬಿಡಬೇಕು. ಪರೀಕ್ಷೆಯನ್ನು ಖುಷಿಯಿಂದ ಬರೆಯಬೇಕು. ಪ್ರತಿ ವಿದ್ಯಾರ್ಥಿಯ ವ್ಯಕ್ತಿತ್ವ ಬೇರೆಯಾಗಿರುತ್ತದೆ. ಹೀಗಾಗಿ ಇತರೆ ವಿದ್ಯಾರ್ಥಿಯನ್ನು ನಕಲು ಮಾಡದೆ ತಮ್ಮಿಷ್ಟದ ದಾರಿಯಲ್ಲಿ ಗುರಿಯೆಡೆಗೆ ಸಾಗಬೇಕು ಎಂದು ಡಿ.ಡಿ.ಪಿ.ಯು ಶಿವಶರಣಪ್ಪ ಮೂಳೆಗಾಂವ ಮಕ್ಕಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಆನಂದಶೀಲ ಕೆ., ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಭಾವತಿ ಪಾಟೀಲ, ಉಪ ಪ್ರಾಂಶುಪಾಲರು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ಪ್ರೌಢ ಮತ್ತು ಪದವಿ ಪುರ್ವ ಕಾಲೇಜಿನ ಸುಮಾರು 500 ಮಕ್ಕಳು ಇದ್ದರು. ಇದೇ ಸಂದರ್ಭದಲ್ಲಿ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟ ಪರಿಶೀಲಿಸಿದ ಡಿ.ಸಿ. ಅವರು ಮಕ್ಕಳೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದರು.