ತಾಳೆಗರಿಗಳಲ್ಲಿನ ವಚನ ಸಾಹಿತ್ಯ ಪೂರ್ವಜರ ಜ್ಞಾನದ ಭಂಡಾರ: ಶಿವರಾಜ ಅಂಡಗಿ
ತಾಳೆಗರಿಗಳಲ್ಲಿನ ವಚನ ಸಾಹಿತ್ಯ ಪೂರ್ವಜರ ಜ್ಞಾನದ ಭಂಡಾರ: ಶಿವರಾಜ ಅಂಡಗಿ
ಗುಂಡಗುರ್ತಿ, ಜು. 7: ತಾಳೆಗರಿಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ವಚನಗಳು ಕೇವಲ ಹಳೆಯ ಓಲೆಗಳಲ್ಲ; ಅವು ನಮ್ಮ ಸಾಹಿತ್ಯ ಪೂರ್ವಜರ ಅಮೂಲ್ಯ ಜ್ಞಾನದ ಭಂಡಾರವಾಗಿವೆ ಎಂದು ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.
ಗುಂಡಗುರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿವಬಸವ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ವಚನ ವಾಚನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ,
ಮುಂಬೈಯಲ್ಲಿ ವಿದ್ಯಾರ್ಥಿ ಜೀವನದಲ್ಲಿದ್ದಾಗ ಗುಜರಾತಿ ಮತ್ತು ಮರಾಠಿ ಭಾಷಿಕರ ಭಾಷಾಭಿಮಾನ ಕಂಡ ಹಳಕಟ್ಟಿಯವರು, ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸುವ ಸಂಕಲ್ಪ ಮಾಡಿ, ತಾಳೆಗರಿಗಳಲ್ಲಿದ್ದ ಸಾವಿರಾರು ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದು ಅವರು ತಿಳಿಸಿದರು.
ಜಗದೀಶ ಮಾರ್ಪಳ್ಳಿ ಮಾತನಾಡಿ, ಹಳಕಟ್ಟಿಯವರು 17 ವರ್ಷಗಳ ನಿರಂತರ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದು, 22 ಸಾವಿರಕ್ಕೂ ಅಧಿಕ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದ ಸಾಧನೆ ಇಂದಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳು ಅವರ ಜೀವನ ಮತ್ತು ಸಾಹಿತ್ಯದಿಂದ ಪ್ರೇರಣೆ ಪಡೆದು ತಮ್ಮ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವಂತ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಚನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿನೋದಕುಮಾರ ಜನೇವರಿ ಅವರು ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೋದಿನಸಾಬ ಗಸ್ತಿ,ಸಂಗಣ್ಣ ಚೋರಗಸ್ತಿ, ಶಿವಬಸವ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ತೋಟ್ನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗುಂಡಗುರ್ತಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಮಾಳಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸ್ಪರ್ಧೆಯಲ್ಲಿ ಭೀಮಾಶಂಕರ, ಪ್ರಜ್ಞಾ ಮತ್ತು ತನು ಪ್ರಥಮ, ಸೌಮ್ಯ, ಆದಿತ್ಯ ಮತ್ತು ಪ್ರಕೃತಿ ದ್ವಿತೀಯ, ಸುರಮ್ಮದೇವಿ, ಚಾಮುಂಡಿ ಹಾಗೂ ಲಕ್ಷ್ಮಿಕಾಂತ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 35 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಿಕ್ಷಕ ಶಾಮಸುಂದರ ಗ್ವಾಡಿ ಸ್ವಾಗತಿಸಿದರು. ಪ್ರಜ್ಞಾ ಪ್ರಾರ್ಥನೆ ನಡೆಸಿದರೆ, ಪ್ರವೀಣಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ಜೈಜಗದೀಶ ಅಕ್ಕಿ ಶಿಕ್ಷಕಿಯರಾದ ಕವಿತಾ,ಆಸ್ಮಾ ಜಹಾನ್, ಉಮಿತಾ,, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
