ಮನುಷ್ಯತ್ವದ ಸಾರ ಅರಿತುಕೊಳ್ಳುವುದೇ ಕನಕದಾಸರ ಆಶಯವಾಗಿತ್ತು - ಮುಕ್ಕಣ್ಣ ಕರಿಗಾರ
ಮನುಷ್ಯತ್ವದ ಸಾರ ಅರಿತುಕೊಳ್ಳುವುದೇ ಕನಕದಾಸರ ಆಶಯವಾಗಿತ್ತು - ಮುಕ್ಕಣ್ಣ ಕರಿಗಾರ
ದೇವದುರ್ಗ : ಜನಸಾಮಾನ್ಯರ ಬದುಕನ್ನು ಹಸನಾಗಿಸಿ,ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವುದರ ಜೊತೆಗೆ ಮನುಷ್ಯತ್ವದ ಸಾರ ನಾಡಿಗೆ ಪಸರಿಸುವುದೇ ಕನಕದಾಸರ ಮೂಲ ಆಶಯವಾಗಿತ್ತು ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಹೇಳಿದರು.
ನಗರದ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರ ವಿದ್ಯಾಗಿರಿ ದೇವದುರ್ಗದಲ್ಲಿ,ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕನಕದಾಸರ ತತ್ವ ಆದರ್ಶಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ನುಡಿದರು.
ಬದುಕಿನ ಸಾತ್ವಿಕ ಸತ್ಯವನ್ನು ಸಾರಿ ಜನ ಸಮೂಹಕ್ಕೆ ಹತ್ತಿರವಾಗಿ ಅವರಲ್ಲಿರುವ ಮೌಡ್ಯ,ಕಂದಾಚಾರ ವರ್ಣಭೇದಗಳಿಂದ ಬೇರ್ಪಡಿಸಿ ಸದಾ ಜನಪರ ನಿಲುವುಗಳನ್ನು ಈ ನಾಡಿಗೆ ವಿಸ್ತರಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದು ಡಾ.ಸಾಬಣ್ಣ ಅವರು ಕನಕದಾಸರ ಸಾಹಿತ್ಯದಲ್ಲಿ ಜನಪರ ನಿಲುವುಗಳು ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರ ದೇವದುರ್ಗದ ನಿರ್ದೇಶಕರಾದ ಡಾ.ಶಾಂತಪ್ಪ ಡಂಬಳ ಮಾತನಾಡಿ ಬದುಕಿನ ಸಾತ್ವಿಕ ಸತ್ಯವನ್ನು ಈ ಜಗತ್ತಿಗೆ ಸಾರಿದ ಕನಕದಾಸರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಅತಿಥಿಗಳಾದ ಡಾ.ಎಸ್.ಎ ಗೋವರ್ಧನ್,ಡಾ.ಯಲ್ಲಪ್ಪ ಟಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸುಧಾ ಮತ್ತು ಸವಿತಾ ಪ್ರಾರ್ಥಿಸಿದರು,ಹನುಮಂತರಾಯ ಸ್ವಾಗತಿಸಿದರು,ವಿಜಯಕುಮಾರ ಮಸಿಹಾಳ ನಿರೂಪಿಸಿದರು,ಪವಿತ್ರ ವಂದಿಸಿದರು.
