ಕಲಬುರಗಿ ವಯಾ ಬೆಂಗಳೂರು ಮಂಗಳೂರು ವಿಮಾನಕ್ಕೆ ಬೇಡಿಕೆ

ಕಲಬುರಗಿ ವಯಾ ಬೆಂಗಳೂರು ಮಂಗಳೂರು ವಿಮಾನಕ್ಕೆ ಬೇಡಿಕೆ

ಮಂಗಳೂರಿಗೆ ಸ್ಟಾರ್ ವಿಮಾನಸೇವೆ ವಿಸ್ತರಣೆಗೆ ಚರ್ಚೆ

ಕಲಬುರಗಿ ವಯಾ ಬೆಂಗಳೂರು ಮಂಗಳೂರು ವಿಮಾನಕ್ಕೆ ಬೇಡಿಕೆ

ಕಲಬುರಗಿ : ಹಲವು ತಿಂಗಳುಗಳಿಂದ ತಗಿತಗೊಂಡಿದ್ದ ಕಲಬುರಗಿ - ಬೆಂಗಳೂರು ವಿಮಾನ ಸಂಚಾರ ಪುನರಾರಂಭಗೊಂಡಿರುವ ಹಿನ್ನಲೆ ಯಲ್ಲಿ ವಿಮಾನಸೇವೆಯನ್ನು ಮಂಗಳೂರು ವರೆಗೆ ವಿಸ್ತರಣೆ ಮಾಡಬೇಕು ಎಂದು ಸ್ಟಾರ್ ವಿಮಾನ ಸಂಸ್ಥೆಯ ಮುಖ್ಯಸ್ಥರ ಜೊತೆ ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಚರ್ಚೆ ನಡೆಸಿ ಒತ್ತಾಯ ಮಾಡಿದೆ. 

    ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ಟಾರ್ ಏರ್ ಲೈನ್ಸ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾ ಮುಖ್ಯಸ್ಥರಾದ ಸಿ.ಎ ಬೋಪಣ್ಣ ಹಾಗೂ ಮಾರುಕಟ್ಟೆ ವಿಭಾಗದ ಮೊಹಮ್ಮದ್ ಸೊಹೈಲ್ ಜೊತೆ ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಕಲಬುರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಚರ್ಚೆ ನಡೆಸಿದರು. ಈಗಾಗಲೇ ಕಲಬುರಗಿಯಿಂದ ಐದಾರು ಬಸ್ಸುಗಳು ನಿತ್ಯ ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದು ಸುಮಾರು 16 ಗಂಟೆಗಳ ಪ್ರಯಾಣದ ಅವಧಿ ಹಿಡಿಯುತ್ತಿದೆ. ಕಲಬುರಗಿ ಭಾಗದಿಂದ ಕರಾವಳಿ ಹಾಗೂ ಕೇರಳ ಕಡೆಗೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಸಂಚಾರ ಮಾಡುತ್ತಿರುವುದರಿಂದ ಕೂಡಲೇ ಮಂಗಳೂರಿಗೆ ವಿಮಾನ ಸಂಪರ್ಕ ಕಲ್ಪಿಸುವಂತೆ ಇರುವ ಸಾಧ್ಯತೆಗಳನ್ನು ತಿಳಿಸಲಾಯಿತು. ಕಲಬುರಗಿಯಿಂದ ಬೆಂಗಳೂರು ಮೂಲಕ ಒನ್ ಸ್ಟಾಪ್ ಮಂಗಳೂರಿಗೆ ವಿಮಾನ ಸಂಚಾರ ಆರಂಭಿಸಿದರೆ ಉತ್ತಮ ಸಂಪರ್ಕ ಸಾಧ್ಯವಾಗುತ್ತದೆ . ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಆಂಧ್ರ ಗಡಿ ಪ್ರದೇಶಗಳ ಜಿಲ್ಲೆಗಳಿಂದ ಶಿಕ್ಷಣ ಹಾಗೂ ಪ್ರವಾಸೋದ್ಯಮದ ನೆಲೆಯಲ್ಲಿ ಸಾವಿರಾರು ಸಂಖ್ಯೆಯ ಜನರು ಕರಾವಳಿ ಭಾಗಕ್ಕೆ ತೆರಳುತ್ತಿದ್ದಾರೆ ಎಂದು ಡಾ.ಪೆರ್ಲ ಮನವರಿಕೆ ಮಾಡಿದರು. ಕರಾವಳಿ ಭಾಗದ ಸಾಕಷ್ಟು ಸಂಖ್ಯೆಯ ಉದ್ಯಮಿಗಳು ಉತ್ತರ ಕರ್ನಾಟಕದಲ್ಲಿ ನೆಲೆಸಿದ್ದು ಕರಾವಳಿಗೆ ಸಂಚಾರ ಮಾಡಲು ತೀವ್ರ ಸಂಕಷ್ಟ ಅನುಭವಿಸುತ್ತಿರುವುದರಿಂದ ಶೀಘ್ರದಲ್ಲೇ ವಿಮಾನಸೇವೆ ಆರಂಭ ಮಾಡಿದರೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ನರಸಿಂಹ ಮೆಂಡನ್ ಹೇಳಿದರು.ಪೌರಾತ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿಯಿಂದಾಗಿ ತೈಲಬೆಲೆ ಏರಿಕೆ ಗೊಂಡಿರುವುದರಿಂದ ಸದ್ಯದಲ್ಲೇ ಹೊಸ ಸ್ಥಳಗಳಿಗೆ ಸೇವೆ ಆರಂಭಗೊಳಿಸುವುದನ್ನು ಸದ್ಯ ಮುಂದೂಡಲಾಗಿದೆ.

ಬಹುತೇಕ ಮುಂದಿನ ತಿಂಗಳಲ್ಲಿ ಮುಂಬೈ ಹಾಗೂ ನಂತರ ಇತರ ಕಡೆಗಳಿಗೆ ಸಂಚಾರ ಆರಂಭಿಸುವ ಬಗ್ಗೆ ಸಂಸ್ಥೆಯು ಚಿಂತನೆ ಮಾಡುತ್ತಿದ್ದು ಪ್ರಯಾಣಿಕರ ದಟ್ಟಣೆಯನ್ನು ಅನುಸರಿಸಿ ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭಿಸಲಾಗುವುದು ಎಂದು ಸ್ಟಾರ್ ಏರ್ ಲೈನ್ಸ್ ಸಂಸ್ಥೆಯ ವಿಮಾನ ನಿಲ್ದಾಣಗಳ ನಿರ್ವಹಣಾಧಿಕಾರಿ ಸಿ.ಎ ಬೋಪಣ್ಣ ಹೇಳಿದರು. ಈ ಸಂದರ್ಭದಲ್ಲಿ ಉದ್ಯಮಿ ಮಹೇಶ್ ಎಂ ಕಡೇಚೂರ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.