ಪಾಚಗಣಿಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಸತ್ಯಶೋಧನ ಶಿಬಿರಕ್ಕೆ ಕಿನ್ನೂರ್ ಚಾಲನೆ
ಪಾಚಗಣಿಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಸತ್ಯಶೋಧನ ಶಿಬಿರಕ್ಕೆ ಕಿನ್ನೂರ್ ಚಾಲನೆ
ಪಾಚಗಣಿ: ಸಾತಾರಾ ಜಿಲ್ಲೆಯ ಪಾಚಗಣಿಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷ ಆಯೋಜಿಸಿದ್ದ ಎರಡು ದಿನಗಳ ಸತ್ಯಶೋಧನ ಶಿಬಿರಕ್ಕೆ ರಾಷ್ಟ್ರೀಯ ಅಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಅವರು ಚಾಲನೆ ನೀಡಿ ಮಾತನಾಡಿದರು.
ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಮಹಾಪುರುಷರ ವಿಚಾರಧಾರೆಗಳನ್ನು ಜನಸಾಮಾನ್ಯರ ಮನೆಮನೆಗೆ ತಲುಪಿಸುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಬೇಕಿದೆ ಎಂದು ಅವರು ಹೇಳಿದರು.
ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಮಹಾದೇವ ಜಾನಕರ ಅವರು ಶಿಬಿರವನ್ನ ಉದ್ದೇಶಿಸಿ ಮಾತನಾಡಿ, ಕಾರ್ಯಕರ್ತರು ಸಮಾಜಮುಖಿ ಚಿಂತನೆಗಳನ್ನು ಜನರಲ್ಲಿ ಬಿತ್ತರಿಸುವ ಜತೆಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಸದೃಢಗೊಳಿಸಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಕ್ರಾಂತಿಕಾರಿ ಸಮಾಜ ಸುಧಾರಕ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಪರಿವರ್ತನೆಗೆ ನೀಡಿದ ಕೊಡುಗೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಅವರ ವಿಚಾರಧಾರೆಗಳ ಆಧಾರದಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ವಿಚಾರಮಂಥನ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಹರ್ಷವರ್ಧನ್ ಸಪ್ಕಾಳ್, ಕಿಸಾನ್ ಸಭೆಯ ವಿಜಯ ಜಾವಂಧಿಯಾ, ಪತ್ರಕರ್ತ ಸಂಜಯ ಅವಟೆ, ಅರ್ಥಶಾಸ್ತ್ರಜ್ಞ ಪ್ರೊ. ಡಾ. ನೀರಜ್ ಹಾತೋಲೆ, ಮರಾಠಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ದೀಪಕ್ ಪವಾರ್, ಲೋಕಮತ್ ದಿನಪತ್ರಿಕೆಯ ಸಾತಾರಾ ಆವೃತ್ತಿಯ ವೃತ್ತಸಂಪಾದಕ ಹನುಮಂತ ಪಾಟೀಲ್, ಕವಿ ನಿತಿನ್ ಚಂದನಶಿವೆ ಹಾಗೂ ಸುಶೀಲಾತಾಯಿ ಮೊರಾಳೆ ಸೇರಿದಂತೆ ಹಲವು ಗಣ್ಯರು ಮಾರ್ಗದರ್ಶನ ನೀಡಿದರು.
ಶಿಬಿರದ ಸಮಾರೋಪದಲ್ಲಿ ಮಹಾದೇವ ಜಾನಕರ ಅವರು, ಮಹಾಪುರುಷರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷದ ವಿಸ್ತರಣೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯ ಮಹಾಸಚಿವ ಜ್ಞಾನೇಶ್ವರ ಸಲ್ಗರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾ. ಭಾಸ್ಕರ್ ಟೆಕಾಳೆ ವಂದಿಸಿದರು. ಯುವ ಅಧ್ಯಕ್ಷ ಅಜಿತ್ ಪಾಟೀಲ್ ಹಾಗೂ ಪಕ್ಷದ ತಂಡದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
“ಹಿಂದುಳಿದ ವರ್ಗಗಳು, ಶೋಷಿತರು, ರೈತರು ಹಾಗೂ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ರಾಷ್ಟ್ರೀಯ ಸಮಾಜ ಪಕ್ಷ ಮತ್ತು ಮಹಾದೇವ ಜಾನಕರ ಅವರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ವಂಚಿತ ಸಮುದಾಯಗಳ ಅಭಿವೃದ್ಧಿಗೆ ಬದ್ಧವಾಗಿರುವ ಇಂತಹ ಶಕ್ತಿಗಳೊಂದಿಗೆ. ಸಮಾಜ ಪರಿವರ್ತನೆ ಮತ್ತು ಜನಸಾಮಾನ್ಯರ ಹಿತಾಸಕ್ತಿಗಾಗಿ ರಾಷ್ಟ್ರೀಯ ಸಮಾಜ ಪಕ್ಷದೊಂದಿಗೆ ರಾಜಕೀಯ ಹಾಗೂ ವೈಚಾರಿಕ ಮಟ್ಟದಲ್ಲಿ ಸಹಕಾರ ಮತ್ತು ಒಪ್ಪಂದಗಳ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕು.”-
ಹರ್ಷವರ್ಧನ್ ಸಪ್ಕಾಳ್, ಕಾಂಗ್ರೆಸ್ ಮುಖಂಡ.
