ಕವಿಗಳು ಜನಸಾಮಾನ್ಯರ ಧ್ವನಿಯಾಗಬೇಕು - ಡಾ :ಅಬ್ದುಲ್ ಕರೀಂ ಕನ್ಯಕೊಳ್ಳೂರ.
ಕವಿಗಳು ಜನಸಾಮಾನ್ಯರ ಧ್ವನಿಯಾಗಬೇಕು - ಡಾ :ಅಬ್ದುಲ್ ಕರೀಂ ಕನ್ಯಕೊಳ್ಳೂರ.
ಶಹಾಪುರ : ಕವಿಗಳಾದವರು ಕೇವಲ ಪ್ರೀತಿ,ಪ್ರೇಮ,ಪ್ರಣಯ ಅಂತ ಬಡಬಡಿಸದೆ,ಬಡತನ ಶೋಷಣೆ ಮತ್ತು ವಾಸ್ತವಿಕ ಸಮಸ್ಯೆಗಳನ್ನು ಎತ್ತಿಹಿಡಿದು, ಜನಸಾಮಾನ್ಯರ ಧ್ವನಿಯಾಗಬೇಕೆಂದು ಡಾ. ಅಬ್ದುಲ್ ಕರೀಂ ಕನ್ಯಕೊಳ್ಳೂರ ಹೇಳಿದರು.
ರವಿವಾರ ಶಹಾಪುರ ಪಟ್ಟಣದ ಮಾತೋಶ್ರೀ ಹೋಟೆಲ್ ಸಭಾಂಗಣದಲ್ಲಿ,ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ಶಹಾಪುರ ಸಾಹಿತ್ಯ ಸಂಭ್ರಮದಲ್ಲಿ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶೋಕಿ ಸಾಹಿತಿಗಳಾಗದೆ,ಜೀವನದ ಅನುಭವಗಳ ಜೊತೆಗೆ ಮನುಷ್ಯತ್ವ ಹಾಗೂ ಸಂಬಂಧಗಳ ಆಳವನ್ನು ಕವಿತೆಗಳಲ್ಲಿ ಹಿಡಿದಿಟ್ಟಾಗ, ಸರಳವಾಗಿ ಓದುಗರ ಮನ ಮುಟ್ಟಿ,ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುತ್ತದೆ ಎಂದು ನುಡಿದರು.
ಸಾಹಿತಿಗಳು ಬರವಣಿಗೆಯ ಮೂಲಕ ಸೃಜನಶೀಲತೆ ಮತ್ತು ಪರಿಕಲ್ಪನೆಯ ಸ್ಪರ್ಶವನ್ನು ಕೊಟ್ಟಾಗ ಮಾತ್ರ ಸಾಹಿತ್ಯ ಮತ್ತಷ್ಟು ರಸದೌತಣ ನೀಡಬಲ್ಲದು ಎಂದು ಹಿರಿಯ ಸಂಶೋಧಕರು ಹಾಗೂ ತಾಲೂಕು ಖಜಾನೆ ಅಧಿಕಾರಿಗಳಾದ ಡಾ.ಮೋನಪ್ಪ ಶಿರವಾಳ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹಾಗೂ ಕವಯಿತ್ರಿ ಪಾರ್ವತಿ ಬೂದೂರ ಕವಿಗೋಷ್ಠಿಯ ಉಪಸ್ಥಿತಿ ವಹಿಸಿಕೊಂಡಿದ್ದರು.ಭೀಮರಾಯ ಭಂಡಾರಿ ಅವರ ಕವಿತೆಯಲ್ಲಿ ಭಾವನೆ ಮತ್ತು ಐಕ್ಯತೆ,ಚೆನ್ನಪ್ಪ ಬಾಗ್ಲಿ ಅವರ ಕವಿತೆಯಲ್ಲಿ ಬುದ್ಧನ ಚಿಂತನೆಗಳು,ಶರಣಗೌಡ ಜೈನಾಪುರ ಅವರ ಕವಿತೆಯಲ್ಲಿ ನಗುವೇ ಜೀವನ,ಪಂಚಾಕ್ಷರಿ ಹಿರೇಮಠ ಅವರ ಕವಿತೆಯಲ್ಲಿ ಕಾಯಕ ಮತ್ತು ಸಾಮಾಜಿಕ ಪ್ರಜ್ಞೆ ಕಂಡರೆ,ಗುರುಪ್ರಸಾದ್ ವೈದ್ಯ ಅವರ ಕವಿತೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟನ್ನು ಬಿಚ್ಚಿಟ್ಟರು,
ಶ್ರೀಶೈಲ್ ಬಿರಾದಾರ ಅವರು ಮುಂದಿನ ಭವಿಷ್ಯದ ಕಲ್ಪನೆಯ ನೆಲೆಗಳು ಕುರಿತು ವಿವರಿಸಿದರು,ಬಸವರಾಜ ಮಾನೆಗಾರ ಅವರು ಕೃಷಿ ಕುರಿತು ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಿದರು,ಮರೆಪ್ಪ ಇನಾಮದಾರ ಅವರ ಕವಿತೆಯಲ್ಲಿ ವಾಸ್ತವೀಕತೆಯ ನಾಡಿನ ಚರಿತ್ರೆ ಕುರಿತು ವಾಚಿಸಿದರು,ದುರ್ಗಪ್ಪ ಪೂಜಾರಿ ಐತಿಹಾಸಿಕ ಪರಂಪರೆಯ ಹಳೆಯ ನೆನಪುಗಳು ಮೆಲಕು ಹಾಕುವಂತೆ ಮಾಡಿದರು.
ಈಶ್ವರ್ ಶಹಾಪುರಕರ ಮನೆಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳು ಬಿಂಬಿಸಿದರೆ, ಮಾಳಿಂಗ ಗಂಗನಾಳ ಅವರ ಕವಿತೆ ರೈತನ ವಾಸ್ತವ ಬದುಕಿನ ಚಿತ್ರಣವನ್ನು ಎಲ್ಲರೆದುರು ತೆರೆದಿಟ್ಟರು,ಬಸವರಾಜ ವನದುರ್ಗ ರವರ ಚಿದ್ರಗೊಂಡ ಮನಸ್ಸುಗಳು ಕೂಡಿಸುವ ಪ್ರಯತ್ನ ಮಾಡಿದರು ಹೀಗೆ ಸುಮಾರು 25 ಕ್ಕೂ ಹೆಚ್ಚು ಯುವಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು.
