ನುಡಿಸಂಭ್ರಮ-26 : ಉಡುಪಿಯಲ್ಲಿ ಅಕ್ಷರ ಜಾತ್ರೆಯ ಸಂಭ್ರಮ
ನುಡಿಸಂಭ್ರಮ-26 : ಉಡುಪಿಯಲ್ಲಿ ಅಕ್ಷರ ಜಾತ್ರೆಯ ಸಂಭ್ರಮ
ಉಡುಪಿಯ ಪವಿತ್ರ ಕ್ಷೇತ್ರದ ಪೇಜಾವರ ಅಧೋಕ್ಷಜ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ “ನುಡಿಸಂಭ್ರಮ-26” ರಾಜ್ಯ ಮಟ್ಟದ ನಾಲ್ಕನೇ ವಾರ್ಷಿಕ ಸಮಾವೇಶವು ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನೆಯ ಸಮಾಗಮವಾಗಿ ಅದ್ಧೂರಿಯಾಗಿ ನಡೆಯಿತು. “ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ” ಹಮ್ಮಿಕೊಂಡ ಈ ಅಕ್ಷರ ಜಾತ್ರೆ
ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ಚಿಂತಕ ಹಾಗೂ ಅಂತರರಾಷ್ಟ್ರೀಯ ವಿದ್ಯಮಾನಗಳ ತಜ್ಞ ಡಾ. ಪ್ರೇಮಶೇಖರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎ ಎಸ್ ಎನ್ ಹೆಬ್ಬಾರ್ ವಹಿಸಿದ್ದರು.
ನುಡಿತೋರಣದ ಸಂಚಾಲಕರಾದ ಶ್ರೀಕಾಂತ ಪತ್ರೆಮರ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯದ ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತ್ಯ ಸಾಧಕಿಯರಾದ ಶೋಭಾ ಹರಿಪ್ರಸಾದ್ ,ಶೈಲಾ ಜಯಕುಮಾರ್ ಮತ್ತು ರಾಧಾ ಟೇಕಲ್ ರವರುಗಳಿಗೆ “ನುಡಿಭೂಷಣ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಧಾ ಟೇಕಲ್ ಅವರು ಕನ್ನಡಕ್ಕೆ ಅನೇಕ ತೆಲುಗು ಮತ್ತು ಉರ್ದು ಕೃತಿಗಳನ್ನು ಅನುವಾದಿಸಿದ ಮಹತ್ವದ ಸಾಹಿತ್ಯ ಸೇವೆಯನ್ನು ಸ್ಮರಿಸಲಾಯಿತು. ಶೈಲಾ ಜಯಕುಮಾರ್ ಅವರು ಕಥೆ, ಕವನ ಹಾಗೂ ವ್ಯಕ್ತಿಚಿತ್ರಣ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಗಾಗಿ ಗೌರವಿಸಲ್ಪಟ್ಟರು. ಶೋಭಾ ಹರಿಪ್ರಸಾದ್ ಅವರು 4000 ಶ್ಲೋಕಗಳ “ಶೋಭಾ ರಾಮಾಯಣ” ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಉದ್ಘಾಟನಾ ಭಾಷಣದಲ್ಲಿ ಡಾ. ಪ್ರೇಮಶೇಖರ ಅವರು ಸಾಹಿತ್ಯದ ಮೌಲ್ಯ, ಬರವಣಿಗೆಯ ನಿಷ್ಠೆ ಮತ್ತು ಇಂದಿನ ಸಾಹಿತ್ಯ ಲೋಕದ ಸವಾಲುಗಳ ಕುರಿತು ಆಳವಾದ ಚಿಂತನೆಗಳನ್ನು ಹಂಚಿಕೊಂಡರು. “ಪ್ರಶಸ್ತಿಗಾಗಿ ಅಲ್ಲ, ಬರವಣಿಗೆಯ ಆನಂದಕ್ಕಾಗಿ ಸಾಹಿತ್ಯ ಸೃಷ್ಟಿಯಾಗಬೇಕು” ಎಂಬ ಅವರ ಮಾತು ಸಭಿಕರಲ್ಲಿ ವಿಶೇಷ ಸ್ಪಂದನೆ ಮೂಡಿಸಿತು. ಮಹಿಳಾ ಲೇಖಕಿಯರು ತಮ್ಮ ಸ್ವತ್ವವನ್ನು ಉಳಿಸಿಕೊಂಡು ಸಾಹಿತ್ಯ ಲೋಕದಲ್ಲಿ ಜಾಗರೂಕರಾಗಿ ಸಾಗಬೇಕು ಎಂಬ ಕಳಕಳಿಯ ಮಾತನ್ನೂ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಕಾಂತ ಪತ್ರೆಮರ ಅವರ “ವ್ಯಕ್ತ ಪತ್ರೆಗಳು”, ಮಧು ವಸ್ತ್ರದ ಅವರ “ಚೈತ್ರದ ಚಿಗುರು”, ವಿಜಯ ನಿರ್ಮಲ ಅವರ “ಕನ್ನಡದ ಆಧುನಿಕ ಸಾಧಕಿಯರು”, ಜಯಶ್ರೀ ರಾಜು ಸಂಪಾದಿತ “ನುಡಿಕಥಾಮಾಲಾ”, ಕಿರಣ್ ಹಿರಿಸಾವೆ ಅವರ “ಆ ಐದು ನಿಮಿಷಗಳು” ಹಾಗೂ ಅದರ ಹಿಂದಿ ಅನುವಾದ “ವೋ ಪಾಂಚ್ ಮಿನಟ್” ಕೃತಿಗಳು ಲೋಕಾರ್ಪಣೆಗೊಂಡವು.
ಅಧ್ಯಕ್ಷೀಯ ಭಾಷಣದಲ್ಲಿ ಎ ಎಸ್ ಎನ್ ಹೆಬ್ಬಾರ್ ಅವರು ಕನ್ನಡ ಭಾಷೆಯ ಉಳಿವು ಮತ್ತು ಬಳಕೆಯ ಅಗತ್ಯತೆಯನ್ನು ಒತ್ತಿಹೇಳಿ, “ಮನೆ ಮತ್ತು ಸಮಾಜದಲ್ಲಿ ಕನ್ನಡವನ್ನು ಬದುಕಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ” ಎಂದು ತಿಳಿಸಿದರು.
