ರಾಜ್ಯ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ನೌಕರರ ಮೇಲಿನ ದೌರ್ಜನ್ಯ ಖಂಡನೆ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಒತ್ತಾಯ

ರಾಜ್ಯ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ನೌಕರರ ಮೇಲಿನ ದೌರ್ಜನ್ಯ ಖಂಡನೆ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಒತ್ತಾಯ

ರಾಜ್ಯ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ನೌಕರರ ಮೇಲಿನ ದೌರ್ಜನ್ಯ ಖಂಡನೆ

ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಒತ್ತಾಯ

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ರಾಜ್ಯ ಸಮಾವೇಶದ ಪೂರ್ವಭಾವಿ ಸಿದ್ಧತಾ ಸಭೆಯನ್ನು ನಗರದ ಬಿಬಿಎಂಪಿ ಹೆಡ್ ಆಫೀಸ್‌ನ ಡಾ. ರಾಜ್‌ಕುಮಾರ್ ಗಾಜಿನ ಮನೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಸಭೆಯಲ್ಲಿ ರಾಜ್ಯದ 240 ತಾಲೂಕು ಘಟಕಗಳ ಹಾಗೂ 32 ಜಿಲ್ಲಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ವಿವಿಧ 84 ಇಲಾಖೆಗಳ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ತಮ್ಮ ಮೇಲೆ ಉನ್ನತ ಅಧಿಕಾರಿಗಳು, ಸಾರ್ವಜನಿಕರು ಮತ್ತು ಕೆಲ ರಾಜಕೀಯ ವ್ಯಕ್ತಿಗಳಿಂದ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಮಾನಸಿಕ ಹಿಂಸೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ನೌಕರರ ಮೇಲಿನ ಅನ್ಯಾಯಗಳನ್ನು ತಡೆಹಿಡಿಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಗಮನಕ್ಕೆ ವಿಷಯವನ್ನು ತಂದು ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

2026ನೇ ಸಾಲಿನ ಸದಸ್ಯತ್ವ ನೋಂದಣಿಯನ್ನು ರಾಜ್ಯದ ಎಲ್ಲಾ ಇಲಾಖೆಗಳ ನೌಕರರು ಕೂಡಲೇ ಮಾಡಿಕೊಳ್ಳುವಂತೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು. ಬೆಳಗಾವಿ ವಿಭಾಗೀಯ ಸಮಾವೇಶ, ಮೈಸೂರು ವಿಭಾಗೀಯ ಸಮಾವೇಶ ಹಾಗೂ ಬೆಂಗಳೂರು ರಾಜ್ಯ ಸಮಾವೇಶವನ್ನು ಶೀಘ್ರದಲ್ಲಿ ಆಯೋಜಿಸುವುದಕ್ಕೂ ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಎಲ್ಲಾ ಇಲಾಖೆಗಳಲ್ಲೂ ರೋಸ್ಟರ್ ಬಿಂದುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಪಾಲನೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಮಹೇಶ್ ಸಿ. ಹುಬ್ಬಳ್ಳಿ, ರಾಜ್ಯ ಕಾರ್ಯಾಧ್ಯಕ್ಷ ಜೈ ಭೀಮ್, ರಾಜ್ಯ ಕಾರ್ಯಾಧ್ಯಕ್ಷ ಅನಿಲ್ ಕುಮಾರ್, ನ್ಯಾಯಾಂಗ ಇಲಾಖೆ ಪ್ರಧಾನ ಕಾರ್ಯದರ್ಶಿ ಶಶಿಕಲಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್. ಜಡಗಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಶ್ರೀಧರ್ ಕೊಟ್ರೆ, ಜಿಲ್ಲಾ ಗೌರವಾಧ್ಯಕ್ಷ ನಾಗರಾಜ್, ರಾಜ್ಯ ಉಪಾಧ್ಯಕ್ಷ ಮುನಿಕೃಷ್ಣಪ್ಪ, ನ್ಯಾಯಾಂಗ ಇಲಾಖೆ ರಾಜ್ಯ ಪದಾಧಿಕಾರಿಗಳಾದ ಸಂಗಮ ಫಾರ್ತಾಬಾದ್, ಸುನಿತಾ ಕೊಂಬಿನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೀತಾ ಮೇಲಿನಕೇರಿ, ಅಶೋಕ್ ಕಲಾದಗಿ, ರವಿ ಹಾದಿಮನಿ, ಶಿಕ್ಷಣಪ್ಪ ಮಂಟಾಳೆ, ಬೆಳಗಾವಿ ಜಿಲ್ಲಾಧ್ಯಕ್ಷ ಮಹದೇವ್ ಐಹೊಳೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಗೋವಿಂದ ಸಣ್ಣಕ್ಕಿ ಹಾಗೂ ಅಂಬಿಕಾ ಗಾಯಕ್ವಾಡ್ ಸೇರಿದಂತೆ ರಾಜ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.