ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ಕಲಬುರಗಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ವತಿಯಿಂದ ಜುಲೈ-2026ರಿಂದ ಆರಂಭವಾಗಲಿರುವ “6 ತಿಂಗಳು/180 ದಿನಗಳ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್” ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಹಕಾರ ಸಂಘ-ಸಂಸ್ಥೆಗಳು, ಸಹಕಾರ ಇಲಾಖೆ ಹಾಗೂ ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತರಬೇತಿಯನ್ನು ಸಂಸ್ಥೆ 1963ರಿಂದ ನಡೆಸುತ್ತಿದ್ದು, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ತರಬೇತಿ ಶಿಕ್ಷಣವನ್ನು ನೀಡುತ್ತಿದೆ.
ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್.ಎಸ್.ಎಲ್.ಸಿ ಅನುತ್ತೀರ್ಣರಾಗಿದ್ದರೂ ಸಹಕಾರಿ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಸಿಬ್ಬಂದಿಯೂ ಅರ್ಹರಾಗಿರುತ್ತಾರೆ. ವಯೋಮಿತಿ 16 ವರ್ಷ ಮೇಲ್ಪಟ್ಟವರಾಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 18ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ ರೂ.500 ಶಿಷ್ಯವೇತನ ನೀಡಲಾಗುತ್ತದೆ.
ಇದೇ ವೇಳೆ ನಿರುದ್ಯೋಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕ-ಯುವತಿಯರಿಗಾಗಿ ವಿಶೇಷ ಡಿಪ್ಲೋಮಾ ತರಬೇತಿಯನ್ನು ಸಹ ಆಯೋಜಿಸಲಾಗಿದ್ದು, ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ವಯೋಮಿತಿ 16ರಿಂದ 30 ವರ್ಷಗಳೊಳಗಿರಬೇಕು. ಈ ಅಭ್ಯರ್ಥಿಗಳಿಗೆ ಮಾಸಿಕ ರೂ.600 ಶಿಷ್ಯವೇತನ ನೀಡಲಾಗುತ್ತದೆ.
ಅರ್ಜಿಯ ನಮೂನೆ ಹಾಗೂ ವಿವರ ಪುಸ್ತಕವನ್ನು ಕಲಬುರಗಿಯ ತರಬೇತಿ ಸಂಸ್ಥೆ ಮತ್ತು ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಹೊಸಪೇಟೆ ಜಿಲ್ಲಾ ಸಹಕಾರ ಯೂನಿಯನ್ ಕಚೇರಿಗಳಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 30-06-2026ರೊಳಗಾಗಿ ಪ್ರಾಂಶುಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಆದರ್ಶನಗರ, ಪ್ರಗತಿ ಕಾಲೋನಿ, ಸೇಡಂ ರಸ್ತೆ, ಕಲಬುರಗಿ-585105 ಇವರಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-245340, 9916726886 ಹಾಗೂ 9742307153 ಅನ್ನು ಸಂಪರ್ಕಿಸಬಹುದಾಗಿದೆ.
