ಜಿಲ್ಲಾ ಜನಜಾಗೃತಿ ವೇದಿಕೆ ಸಭೆಗೆ ಚಾಲನೆ ನೀಡಿ ದಿನೇಶ್ ಪೂಜಾರಿ ಹೇಳಿಕೆ
*ಅಭಿವೃದ್ಧಿ ಹೊಂದಿದ ನವ ಸಮಾಜ ನಿರ್ಮಾಣ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಗುರಿ*
*ಜಿಲ್ಲಾ ಜನಜಾಗೃತಿ ವೇದಿಕೆ ಸಭೆಗೆ ಚಾಲನೆ ನೀಡಿ ದಿನೇಶ್ ಪೂಜಾರಿ ಹೇಳಿಕೆ*
ಕಲಬುರಗಿ : ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ ಪರಿವರ್ತನೆಯ ಅಭಿವೃದ್ಧಿ ಹೊಂದಿದ ನವ ಸಮಾಜವನ್ನು ಹುಟ್ಟು ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ಅಭಿಪ್ರಾಯ ಪಟ್ಟರು.
ಕಲಬುರಗಿ ಜಿಲ್ಲಾ ಕಛೇರಿಯ ಮಾತೃಶ್ರೀ ಸಭಾಭವನದಲ್ಲಿ ಮೇ 23ರಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ದುಶ್ಚಟ, ದುರಭ್ಯಾಸ, ನಿವಾರಣೆಯೊಂದಿಗೆ ಸ್ವಾವಲಂಬನೆಯ ಸಮಾಜ ನಿರ್ಮಾಣ ಮಾಡಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಕ್ಕೆ ಕಂಕಣಬದ್ಧರಾಗಿದ್ದು ಸಮಾಜದ ಕೈಗೊಂಡಿರುವ ಹತ್ತಾರು ಯೋಜನೆಗಳು ಇಂದು ಮೌನ ಕ್ರಾಂತಿ ಮಾಡುತ್ತಿದೆ. ಜನಜಾಗೃತಿ ವೇದಿಕೆಯ ಮೂಲಕ ಅನುಷ್ಠಾನಗೊಂಡಿರುವ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯಸಂಕಲ್ಪ ಯೋಜನೆಗಳು ಪರಿಣಾಮಕಾರಿ ಬದಲಾವಣೆಗೆ ಪ್ರೇರಣೆ ನೀಡಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಮತ್ತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಅರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ನಿರಂತರ ತೊಡಗಿಕೊಂಡಿರುವುದು ಶ್ಲಾಘನೀಯ. ಇದರೊಂದಿಗೆ ಸಮಾಜ ಮುಖಿ ಸೇವೆಯಲ್ಲಿ ತೊಡಗಿಕೊಂಡಿರುವ ಸ್ಥಳೀಯ ಸಂಘ - ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಸಂಸ್ಥೆಯ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ, ಮನ ಮನಕ್ಕೆ ತಲುಪಿಸಲು ಸಾಧ್ಯ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಿ. ಎನ್ ಬಾಬಾಳಗಾoವ್ ಮಾತನಾಡಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹುಟ್ಟು ಹಾಕಿದ ಜನಜಾಗೃತಿ ವೇದಿಕೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅವರದು ದೊಡ್ಡ ಕೊಡುಗೆಯಾಗಿದ್ದು ನಾಡಿನಾದ್ಯಂತ ಮೆಚ್ಚುಗೆ ಪಡೆದಿದ್ದಾರೆ.ಇಂತಹ ಮಹಾನ್ ವ್ಯಕ್ತಿಗಳ ನೇತೃತ್ವದಲ್ಲಿ ನಮಗೆ ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜನಜಾಗೃತಿ ವೇದಿಕೆಯ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಅಭಿವೃದ್ಧಿ ಹೊಂದಿದ ಸಮಾಜ ಕಟ್ಟುವ ಬಗ್ಗೆ ಒಟ್ಟಾಗಿ ದುಡಿಯೋಣ ಎಂದು ಸದಸ್ಯರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರುಗಳಾದ ಆಫ್ಜಲ್ಪುರ ತಾಲೂಕಿನ ಚಂದ್ರಶೇಖರ ಕರ್ಜಗಿ, ಆಳಂದ ತಾಲೂಕಿನ ಶಾಂತಪ್ಪ ಕೋರೆ, ಕಲಬುರಗಿ ತಾಲೂಕಿನ ನ್ಯಾಯವಾದಿ ಮಾಲತಿ ರೇಶ್ಮಿ, ಕಮಲಾಪುರ್ ತಾಲೂಕಿನ ಅನಿಲ್ ಕುಮಾರ್ ಡಾಂಗೆ, ಚಿಂಚೋಳಿ ತಾಲೂಕಿನ ನರಸಮ್ಮ ಆವಂಟಿ,ನ್ಯಾಯವಾದಿ ಸಿದ್ದು ಹಿರೇಮಠ ಸಲಹೆ ಸೂಚನೆ ನೀಡಿ ಅನಿಸಿಕೆಗಳನ್ನು ಹಂಚಿಕೊಂಡರು.
ಜನಜಾಗೃತಿ ವೇದಿಕೆಯ ಜಿಲ್ಲಾಕಾರ್ಯದರ್ಶಿ ಹಾಗೂ ಯೋಜನಾ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಸಭೆಯಲ್ಲಿ ವರದಿ ಮಂಡಿಸಿದರು.
ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ರಾಜೇಶ್ ಕೆ. ಜನಜಾಗೃತಿ ವೇದಿಕೆಯ ವಾರ್ಷಿಕ ಕಾರ್ಯಕ್ರಮಗಳು ಹಾಗೂ ಮಂಜೂರಾಗಿರುವ ಅನುದಾನಗಳ ಬಗ್ಗೆ ತಿಳಿಸಿದರು.
ಕಮಲಾಪುರ,
ಕಲಬುರಗಿ. ಆಳಂದ, ಆಫ್ಜಲ್ಪುರ. ಚಿಂಚೋಳಿ, ಸೇಡಂ ತಾಲೂಕಿನ ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳು, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದು ನೂತನವಾಗಿ ಯೋಜನಾ ಕಚೇರಿಗೆ ಆಗಮಿಸಿದ ನೂತನ ಯೋಜನಾಧಿಕಾರಿಗಳ ಪರಿಚಯವನ್ನು ಮಾಡಿ ಕಳೆದ ವರ್ಷದ ಸಾಧನೆಯ ವರದಿಯನ್ನು ಮಂಡಿಸಿದರು. ಅಫ್ಜಲ್ಪುರ ಯೋಜನಾಧಿಕಾರಿ ಮಹಾಂತೇಶ್ ಸ್ವಾಗತಿಸಿ ಕಮಲಾಪುರ ಯೋಜನಾಧಿಕಾರಿ ರಜಬ್ ಅಲಿ ವಂದಿಸಿದರು. ಜಿಲ್ಲಾ ವಿಚಕ್ಷಣಾಧಿಕಾರಿ ಚಿದಂಬರ ಕೆ. ನಿರೂಪಿಸಿದರು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
