ಉಪನ್ಯಾಸಕರ ಕಾರ್ಯಭಾರ ಕೊರತೆಯೆಂದು ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯನ್ನು ರದ್ದು ಪಡಿಸಬೇಕೆಂದು ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದಿಂದ ಮನವಿ

ಉಪನ್ಯಾಸಕರ ಕಾರ್ಯಭಾರ ಕೊರತೆಯೆಂದು ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯನ್ನು ರದ್ದು ಪಡಿಸಬೇಕೆಂದು ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದಿಂದ ಮನವಿ

ಉಪನ್ಯಾಸಕರ ಕಾರ್ಯಭಾರ ಕೊರತೆಯೆಂದು ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯನ್ನು ರದ್ದು ಪಡಿಸಬೇಕೆಂದು ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದಿಂದ ಮನವಿ

ಕಲಬುರ್ಗಿ:ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಉಪನ್ಯಾಸಕರ ಕಾರ್ಯಭಾರ ಕಡಿಮೆ ಎಂದು ಗುರುತಿಸಿ ಉಪನ್ಯಾಸಕರ ಪಟ್ಟಿಯನ್ನು ಅವೈಜ್ಞಾನಿಕವಾಗಿ ಮಾಡಿ ಬಿಡುಗಡೆ ಮಾಡಿದ್ದನ್ನು ಕೂಡಲೆ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿಯವರ ಮುಖಾಂತರ ಮಾನ್ಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆಯ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರಿಗೆ ಹಾಗೂ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ದಿನಾಂಕ 08/05/2026 ರಂದು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರದ ಕೊರತೆಯಿದೆ ಎಂದು ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯು ಅತ್ಯಂತ ಅವೈಜ್ಞಾನಿಕತೆಯಿಂದ ಕೂಡಿದೆ ಈ ಪಟ್ಟಿಯನ್ನು ನೋಡಿದರೆ ವಿಶೇಷವಾಗಿ ಅನುದಾನಿತ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.ಈಗಾಗಲೇ ಕಡಿಮೆ ಕಾರ್ಯಭಾರವೆಂದು ಗುರುತಿಸಿರುವ ಪದ್ಧತಿಯಲ್ಲೆ ದೋಷವಿದ್ದು ಅದು 320 :1 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಅನುಪಾತ ಹೊಂದಿದೆ.ರಾಜ್ಯ ಉಪನ್ಯಾಸಕರ ಸಂಘವು ಕಳೆದೆರಡು ವರ್ಷಗಳಿಂದ ಈ ಅನುಪಾತವನ್ನು 180:1 ಕ್ಕೆ ಇಳಿಸಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವಂತೆ ಸಾಕಷ್ಟು ಬಾರಿ ಮನವಿ ನೀಡಿ ಹೋರಾಟ ಹಮ್ಮಿಕೊಂಡಿದ್ದರೂ ಕೂಡಾ ಅದನ್ನು ಇಲಾಖೆ ಮಾನ್ಯ ಮಾಡದೇ ಇರುವುದರ ಫಲವಾಗಿ ಇಂದು ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳು ಮುಚ್ಚುವ ಹಂತದಲ್ಲಿವೆ.

ಇಂದು ರಾಜ್ಯದಲ್ಲಿ 3263 ಖಾಸಗಿ ಕಾಲೇಜುಗಳಿದ್ದು 1340 ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿವೆ. ಕೇವಲ 7644 ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು 5269 ಹುದ್ದೆಗಳು ಖಾಲಿ ಇರುತ್ತವೆ.

ಉಪನ್ಯಾಸಕರ ಕೊರತೆ ಇರುವ ಕಾಲೇಜುಗಳಿಗೆ ಪೋಷಕರು ಹೇಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಸಾಧ್ಯ? ಈ ಸಂದರ್ಭದಲ್ಲಿ ಅವೈಜ್ಞಾನಿಕ ಅನುಪಾತ ಮುಂದಿಟ್ಟುಕೊಂಡು ಇರುವ ಉಪನ್ಯಾಸಕರನ್ನೇ ನಿಯೋಜನೆ ಹೆಸರಲ್ಲಿ ಇತರೇ ಕಾಲೇಜುಗಳಿಗೆ ಕಳುಹಿಸಿದರೆ ಸರ್ಕಾರಿ, ಅನುದಾನಿತ ಕಾಲೇಜುಗಳು ಉಳಿವುದಾದರೂ ಹೇಗೆಂಬ ಭೀತಿ ಎದುರಾಗಿದೆ.ಇಂತಹಾ ನೀತಿಯಿಂದಾಗಿ ಆರ್ಥಿಕವಾಗಿ ಹಿಂದುಳಿದಿರುವ ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಲಿದ್ದು ಶಿಕ್ಷಣ ಕೇವಲ ಉಳ್ಳವರ ಸೊತ್ತಾಗಲಿದೆ.

ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿಯೇ ಇರುವ 51 ಸರ್ಕಾರಿ ಕಾಲೇಜುಗಳ 193 ಉಪನ್ಯಾಸಕರನ್ನು ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರೆಂದು ಗುರುತಿಸಿದ್ದು ಇದರಿಂದಾಗಿ 47 ಕಾಲೇಜುಗಳು ಇದರಿಂದ ಭಾಧಿತವಾಗಲಿದೆ.ಇದು ಗುಣಾತ್ಮಕ ಶಿಕ್ಷಣಕ್ಕೆ ಸಂಪೂರ್ಣ ವಿರುದ್ಧವಾಗಿದ್ದು ಈ ಪಟ್ಟಿಯನ್ನು ಜಾರಿಗೊಳಿಸಿದಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅನೇಕ ಸರ್ಕಾರಿ ಕಾಲೇಜುಗಳು ಶೀಘ್ರವಾಗಿ ಮುಚ್ಚುವ ಸಾಧ್ಯತೆಯನ್ನು ಮನಗಂಡು ಜನಪ್ರತಿನಿಧಿಗಳಾದ ತಾವು ಇಲಾಖೆ ಮತ್ತು ಸರ್ಕಾರಕ್ಕೆ ಈ ಪಟ್ಟಿಯನ್ನು ಹಿಂಪಡೆಯಲು ಮನವರಿಕೆ ಮಾಡಲು ತಮಗೆ ಮನವಿ ನೀಡುತ್ತಿದ್ದೇವೆ ಎಂದು ಸಂಘದ ಸದಸ್ಯರು ತಿಳಿಸಿದರು. ಮನವಿಯನ್ನು ಸ್ವಿಕರಿಸಿದ ವಿ ಪ ಸದಸ್ಯ ಶಶೀಲ್ ಜಿ ನಮೋಶಿ ನಾನು ಸದಾ ನಿಮ್ಮ ನ್ಯಾಯಯುತ ಬೇಡಿಕೆಗಳ ಪರವಾಗಿದ್ದು ತಕ್ಷಣವೆ ಸಚಿವರು ಹಾಗೂ ಸಂಭಂದಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಖಜೂರ್ಗಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಜೇ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನರಸಪ್ಪ ರಂಗೋಲಿ,ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಸವಿತಾ ನಾಶಿ, ಉಪನ್ಯಾಸಕ ಐ ಕೆ ಪಾಟೀಲ್ , ಎಸ್ ಐ ಪಾಟೀಲ್ ಇನ್ನಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು