ಇಟಗ ಗ್ರಾಮದಲ್ಲಿ ‘ಧಮ್ಮ ದೀಪ’ ಸಾಂಸ್ಕೃತಿಕ ಕಾರ್ಯಕ್ರಮ

ಇಟಗ ಗ್ರಾಮದಲ್ಲಿ ‘ಧಮ್ಮ ದೀಪ’ ಸಾಂಸ್ಕೃತಿಕ ಕಾರ್ಯಕ್ರಮ

ಇಟಗ ಗ್ರಾಮದಲ್ಲಿ ‘ಧಮ್ಮ ದೀಪ’ ಸಾಂಸ್ಕೃತಿಕ ಕಾರ್ಯಕ್ರಮ

ಕಲಬುರಗಿ: ತಾಲೂಕಿನ ಇಟಗ ಗ್ರಾಮದಲ್ಲಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘದ ವತಿಯಿಂದ ‘ಧಮ್ಮ ದೀಪ’ ಸಾಂಸ್ಕೃತಿಕ ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾಟಕ ಮತ್ತು ಸಾಂಸ್ಕೃತಿಕ ಕಲಾ ಪ್ರದರ್ಶನಗಳ ಮೂಲಕ ಜನರಿಗೆ ಪರಿಚಯಿಸುವ ಪ್ರಯತ್ನ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ರಂಗ ಶಿಕ್ಷಕ ಭೀಮಳ್ಳಿಯ ರಾಘವೇಂದ್ರ ಹಳಿಪೇಟಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ವಿಶೇಷವಾಗಿ ರಂಗಭೂಮಿಯ ಮೂಲಕ ಇಂತಹ ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಇಟಗ ಗ್ರಾಮದಲ್ಲಿ ನಡೆಯುತ್ತಿರುವ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಬೇಕು. ರಂಗ ವೃಕ್ಷ ಕಲಾತಂಡವು ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿ ತನ್ನ ಚಟುವಟಿಕೆಗಳನ್ನು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ವಿಸ್ತರಿಸಲಿ ಎಂದು ಅವರು ಶುಭ ಹಾರೈಸಿದರು.

ರಂಗಕರ್ಮಿ ಶಾತಲಿಂಗಯ್ಯ ಮಠಪತಿ, ಕಲಬುರಗಿ ಮಾತನಾಡಿ, ರಂಗಭೂಮಿಯನ್ನು ನಂಬಿಕೊಂಡು ಜೀವನ ನಡೆಸುವುದು ಸುಲಭದ ಕೆಲಸವಲ್ಲ. ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದು ಮತ್ತಷ್ಟು ಸವಾಲಿನ ಸಂಗತಿಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿ ಜನರ ಮೆಚ್ಚುಗೆ ಗಳಿಸುವುದು ದೊಡ್ಡ ಸಾಧನೆ ಎಂದು ಹೇಳಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ನಾಟಕಗಳ ಮೂಲಕ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯವನ್ನು ರಂಗ ವೃಕ್ಷ ಕಲಾತಂಡ ಮಾಡುತ್ತಿರುವುದು ಶ್ಲಾಘನೀಯ. ಈ ತಂಡದ ಸಾಂಸ್ಕೃತಿಕ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ದಲಿತ ಮುಖಂಡರಾದ ರೇಖಾ ದೊಡ್ಮನಿ ಸೇರಿದಂತೆ ಗ್ರಾಮದ ಹಿರಿಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಕಲಾತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘದ ಕಲಾವಿದರು ವಿವಿಧ ನಾಟಕ, ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.