ನ್ಯಾಯಾಲಯದ ಅಂತಿಮ ತೀರ್ಪಿನವರೆಗೆ ಹಳೆಯ ಮೀಸಲಾತಿ ವ್ಯವಸ್ಥೆ ಮುಂದುವರಿಸಲು ಮನವಿ
ನ್ಯಾಯಾಲಯದ ಅಂತಿಮ ತೀರ್ಪಿನವರೆಗೆ ಹಳೆಯ ಮೀಸಲಾತಿ ವ್ಯವಸ್ಥೆ ಮುಂದುವರಿಸಲು ಮನವಿ
ಕಲಬುರಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂತೋಷ್ ಟಿ. ಆಡೆ ಅವರ ನೇತೃತ್ವದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಆದರೆ ಒಳ ಮೀಸಲಾತಿ ವರ್ಗೀಕರಣ ಹಾಗೂ ಶೇಕಡಾವಾರು ಹಂಚಿಕೆ ಪ್ರಶ್ನಿಸಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ ಎಂದು ಸಂಘಟನೆ ತಿಳಿಸಿದೆ.
ನೇಮಕಾತಿಗೆ ಸಂಬಂಧಿಸಿದಂತೆ WP No.23399/2026 ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ಇರುವುದರಿಂದ, ನ್ಯಾಯಾಲಯದ ಅಂತಿಮ ತೀರ್ಪು ಹೊರಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವುದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಆಗಸ್ಟ್ 13ರಿಂದ ಆರಂಭವಾಗಲಿರುವ ಕರ್ನಾಟಕ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಬಂಜಾರ, ಭೋವಿ, ಕೊರಚ ಹಾಗೂ ಕೊರಮ (ಕೋಲಂಬೊ) ಸಮುದಾಯಗಳ ಪರವಾಗಿ ಶಾಸಕ ಬಸವರಾಜ ಮತ್ತಿಮೂಡ ಅವರು ಸದನದಲ್ಲಿ ಧ್ವನಿ ಎತ್ತಬೇಕು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಸಮುದಾಯದ ಹಿತದೃಷ್ಟಿಯಿಂದ ಶಾಸಕರು ಈ ಬೇಡಿಕೆಗೆ ಬೆಂಬಲ ನೀಡಬೇಕು ಎಂದು ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್ ಜಿಲ್ಲಾ ಘಟಕ ಮನವಿ ಮಾಡಿದೆ.
ಸಂದರ್ಭದಲ್ಲಿ ಆಕಾಶ ರಾಠೋಡ್, ಸುರೇಶ್ ರಾಠೋಡ್, ಶಾಮ ಆಡೆ, ದತ್ತು ಜಾದವ್, ಸುಭಾಷ್ ರಾಠೋಡ್, ವಾಲ್ಮೀಕಿ ರಾಠೋಡ್, ಶ್ರೀಮಂತ್ ಪವಾರ್ ನಂದೂರ್, ಸೋಮು ರಾಟೋಡ್ ಸೇರಿದಂತೆ ಇತರರು ಇದ್ದರು.

