ನೀಲಕಂಠರಾವ್ ಮೂಲಗೆ ಅವರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ
ನೀಲಕಂಠರಾವ್ ಮೂಲಗೆ ಅವರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ
25–35 ವರ್ಷಗಳಿಂದ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ: ಸಚಿನ್ ಎಸ್. ಫರತಾಬಾದ್
ಕಲಬುರಗಿ: ಕಾಂಗ್ರೆಸ್ ಪಕ್ಷದಲ್ಲಿ ಕಳೆದ 25ರಿಂದ 35 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮುಖಂಡರಾದ ಶ್ರೀ ನೀಲಕಂಠರಾವ್ ಮೂಲಗೆ ಅವರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸಚಿನ್ ಎಸ್. ಫರತಾಬಾದ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೀಲಕಂಠರಾವ್ ಮೂಲಗೆ ಅವರು ಪ್ರತಿಯೊಂದು ಚುನಾವಣೆಯಲ್ಲಿಯೂ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಯಾವುದೇ ಅಧಿಕಾರ ಅಥವಾ ಹುದ್ದೆಯ ಆಸೆ ಇಲ್ಲದೆ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ. ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅವರನ್ನು ಕೆಎಸ್‌ಆರ್‌ಟಿಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದ್ದರೂ, ನಂತರ ಅಧಿಕಾರ ನೀಡದಿದ್ದರೂ ಪಕ್ಷವನ್ನು ತೊರೆಯದೆ ಕಾಂಗ್ರೆಸ್‌ನಲ್ಲಿಯೇ ಮುಂದುವರಿದು ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸಿರುವುದು ಅವರ ಪಕ್ಷನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಸಮಾಜದ ಪ್ರತಿಯೊಂದು ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ, ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಿರುವುದು ಹಾಗೂ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಬದ್ಧತೆ ಹೊಂದಿರುವುದು ನೀಲಕಂಠರಾವ್ ಮೂಲಗೆ ಅವರ ಪ್ರಮುಖ ಗುಣಗಳಾಗಿವೆ. ಇಂತಹ ಅನುಭವಿ ಹಾಗೂ ನಿಷ್ಠಾವಂತ ನಾಯಕರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಸಚಿನ್ ಎಸ್. ಫರತಾಬಾದ್ ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಹಿರಿಯ ನಾಯಕರು ಒಗ್ಗಟ್ಟಾಗಿ ನೀಲಕಂಠರಾವ್ ಮೂಲಗೆ ಅವರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

