‘VB-G RAM G’ ಯೋಜನೆ: ನಿಯಮಬಾಹಿರ ಒತ್ತಡ ಖಂಡಿಸಿ ಆ.15ರಿಂದ PDOಗಳ ಕಾರ್ಯಚಟುವಟಿಕೆ ಬಹಿಷ್ಕಾರ
‘VB-G RAM G’ ಯೋಜನೆ: ನಿಯಮಬಾಹಿರ ಒತ್ತಡ ಖಂಡಿಸಿ ಆ.15ರಿಂದ PDOಗಳ ಕಾರ್ಯಚಟುವಟಿಕೆ ಬಹಿಷ್ಕಾರ
ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಅಂತಿಮ ಕಾಲಾವಕಾಶ ನೀಡಿದ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ
ಕಲಬುರಗಿ: ‘VB-G RAM G’ ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಮೇಲೆ ನಡೆಯುತ್ತಿರುವ ಅತಿಯಾದ, ಅವೈಜ್ಞಾನಿಕ ಹಾಗೂ ನಿಯಮಬಾಹಿರ ಒತ್ತಡಗಳನ್ನು ಖಂಡಿಸಿ, ಆಗಸ್ಟ್ 15ರಿಂದ ಯೋಜನೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಬಹಿಷ್ಕರಿಸಲು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ.) ನಿರ್ಧರಿಸಿದೆ.
ಈ ಕುರಿತು ಸಚಿವರ ಕಚೇರಿ, ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ PDOಗಳ ಸಮಸ್ಯೆಗಳನ್ನು ತರಲಾಗಿದೆ. ಆದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘವು ಸಂಘಟಿತ ಪ್ರತಿಭಟನೆಗೆ ಮುಂದಾಗಿದೆ ಎಂದು ರಾಜ್ಯ ನಿರ್ದೇಶಕಿ ಕು ರಾಜೇಶ್ವರಿ ಸಾಹು ತಿಳಿಸಿದ್ದಾರೆ.
ಯೋಜನೆಗೆ ಸ್ಪಷ್ಟ ಮಾರ್ಗಸೂಚಿ (SOP) ಇಲ್ಲದಿರುವುದು, ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಗತ್ಯ ವಿನಾಯಿತಿ ಆದೇಶ ನೀಡದಿರುವುದು, ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನ ಮಾಹಿತಿ ನೀಡುತ್ತಿರುವುದು ಹಾಗೂ ಅನುಮೋದಿತ ಕ್ರಿಯಾಯೋಜನೆ ಮತ್ತು ಟೆಂಡರ್ ಪ್ರಕ್ರಿಯೆ ಇಲ್ಲದೆಯೇ ಕಾಮಗಾರಿಗಳನ್ನು ಆರಂಭಿಸಲು ಒತ್ತಡ ಹೇರುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳಿವೆ ಎಂದು ಸಂಘ ಆರೋಪಿಸಿದೆ.
ಇತರ ಇಲಾಖೆಗಳ ಕಾಮಗಾರಿಗಳ ತಾಂತ್ರಿಕ ಮಾಹಿತಿ ಮತ್ತು ಮೌಲ್ಯಮಾಪನ PDOಗಳಿಗೆ ಲಭ್ಯವಿಲ್ಲದಿದ್ದರೂ, ಅವುಗಳ ಬಿಲ್‌ಗಳ ಪಾವತಿ ಹೊಣೆಯನ್ನು PDOಗಳ ಮೇಲೆ ಹೊರಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಕಾನೂನು ಹಾಗೂ ಆರ್ಥಿಕ ಸಮಸ್ಯೆಗಳಿಗೆ PDOಗಳೇ ಹೊಣೆಗಾರರಾಗುವ ಸಾಧ್ಯತೆ ಇದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.
ಅಲ್ಲದೆ, ನೈಜ ಬೇಡಿಕೆ ಇಲ್ಲದಿದ್ದರೂ ಕೃತಕ NMR ತೆಗೆದುಕೊಳ್ಳುವಂತೆ ಒತ್ತಾಯಿಸುವುದು, ಕಚೇರಿ ಅವಧಿ ಮುಗಿದ ಬಳಿಕ ರಾತ್ರಿ ಸಭೆಗಳನ್ನು ನಡೆಸುವುದು, ಶೋಕಾಸ್ ನೋಟಿಸ್ ನೀಡುವುದು, ‘1 to 4’ ತಡೆ ಹಾಗೂ ಅಮಾನತು ಮಾಡುವುದಾಗಿ ಬೆದರಿಕೆ ಹಾಕುವುದು ಸೇರಿದಂತೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸಂಘದ ಪ್ರಮುಖ ಬೇಡಿಕೆಗಳು
ಯೋಜನೆಗೆ ತಕ್ಷಣ ಏಕರೂಪದ ಸ್ಪಷ್ಟ SOP ಬಿಡುಗಡೆ ಮಾಡಬೇಕು. ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಅಧಿಕೃತ ವಿನಾಯಿತಿ ನೀಡಬೇಕು. ಟೆಂಡರ್ ಮತ್ತು ಕ್ರಿಯಾಯೋಜನೆ ಇಲ್ಲದೆ ಕಾಮಗಾರಿ ಕೈಗೊಳ್ಳುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಇತರ ಇಲಾಖೆಗಳ ತಾಂತ್ರಿಕ ಮಾಹಿತಿ ಇಲ್ಲದ ಕಾಮಗಾರಿಗಳ ಪಾವತಿ ಹೊಣೆಯನ್ನು PDOಗಳ ಮೇಲೆ ಹೊರಿಸುವ ಆದೇಶ ಹಿಂಪಡೆಯಬೇಕು ಎಂದು ಸಂಘ ಒತ್ತಾಯಿಸಿದೆ.
ಕೃತಕ NMR, ಅವೈಜ್ಞಾನಿಕ ಗುರಿ, ಅಮಾನತು ಬೆದರಿಕೆ, ಶೋಕಾಸ್ ನೋಟಿಸ್, ‘1 to 4’ ತಡೆ ಹಾಗೂ ರಾತ್ರಿ ವೇಳೆಯ ಅನಗತ್ಯ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಆಗಸ್ಟ್ 15ರವರೆಗೆ ಅಂತಿಮ ಕಾಲಾವಕಾಶ
ಆಗಸ್ಟ್ 15, 2026ರೊಳಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯದಿದ್ದರೆ ರಾಜ್ಯಾದ್ಯಂತ ಯಾವುದೇ NMR ತೆಗೆದುಕೊಳ್ಳದೆ, ಯೋಜನೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸದೆ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
“ಜನರಿಗೆ ಉದ್ಯೋಗ ನೀಡುವ ಸರ್ಕಾರದ ಆಶಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ತಾಂತ್ರಿಕ ಮಾಹಿತಿ ಇಲ್ಲದ ಇತರ ಇಲಾಖೆಗಳ ಬಿಲ್‌ಗಳ ಪಾವತಿ, ಕ್ರಿಯಾಯೋಜನೆ ಇಲ್ಲದೆ ಕಾಮಗಾರಿ ನಡೆಸಲು ಒತ್ತಡ ಹಾಗೂ ನಿಯಮಬಾಹಿರವಾಗಿ PDOಗಳ ಮೇಲೆ ಹೊಣೆಗಾರಿಕೆ ಹೊರಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಸಚಿವರು ಮತ್ತು 31 ಜಿಲ್ಲೆಗಳ CEOಗಳ ಗಮನಕ್ಕೆ ತಂದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಸಂಘದ ರಾಜ್ಯ ನಿರ್ದೆಶಕಿ ಮತ್ತು ಕಲಬುರಗಿ ಜಿಲ್ಲಾದ್ಯಕ್ಷೆ ಕು ರಾಜೇಶ್ವರಿ ಸಾಹು ತಿಳಿಸಿದ್ದಾರೆ

