ಸುಲೇಪೇಟ ಗ್ರಾಮಕ್ಕೆ 1200 ವರ್ಷಗಳ ಇತಿಹಾಸ ಶಿವನ ಉಗ್ರ ಆರಾಧಕರಾದ ಕಾಪಾಲಿಕರ ನೆಲೆ ಸುಲ್ಯಗ್ರಾಮ ಅಸ್ಲಮ ಮ. ವಾಲಿಕಾರ ಅಭಿಮತ
ಸುಲೇಪೇಟ ಗ್ರಾಮಕ್ಕೆ 1200 ವರ್ಷಗಳ ಇತಿಹಾಸ
ಶಿವನ ಉಗ್ರ ಆರಾಧಕರಾದ ಕಾಪಾಲಿಕರ ನೆಲೆ ಸುಲ್ಯಗ್ರಾಮ ಅಸ್ಲಮ ಮ. ವಾಲಿಕಾರ ಅಭಿಮತ
ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮಕ್ಕೆ 1200 ವರ್ಷಗಳ ಇತಿಹಾಸವಿದೆ. ಇದೊಂದು ಶಿವನ ಉಗ್ರ ಆರಾಧಕರಾದ ಕಾಪಾಲಿಕರ ನೆಲೆಯಾಗಿತ್ತು. ಇಲ್ಲಿ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರ ಐತಿಹಾಸಿಕ ಸ್ಮಾರಕಗಳಿವೆ. ಇಲ್ಲಿನ ಎರಡು ಶೈವ ದೇವಾಲಯಗಳು ಕಾಲಾಮುಖ ಪಂಥದ ನೇರ ಪ್ರಭಾವಕ್ಕೊಳಗಾಗಿವೆ. ಕಾಪಾಲಿಕರು ಮಾಂಸ ಸೇವಕರಾಗಿದ್ದರು. ಇವರಿಂದಾಗಿಯೇ ಇದಕ್ಕೆ ಸುಲ್ಯ ಗ್ರಾಮ ಎಂಬ ಹೆಸರು ಬಂದಿರುವ ಸಾಧ್ಯತೆಯಿದೆ ಎಂದು ಕಲಬುರಗಿಯ ಖಾಜಾ ಬಂದಾನವಾಜ ವಿವಿಯ ಸಹಾಯಕ ಪ್ರಾಧ್ಯಾಪಕರಾದ ಅಸ್ಲಮ್ ಮ. ವಾಲಿಕಾರ ಹೇಳಿದರು.
ಸುಲೇಪೇಟದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಧಾರವಾಡದ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಸುಲ್ಯಗ್ರಾಮ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸುಲ್ಯ ಎಂದರೆ ಸಂಸ್ಕೃತದಲ್ಲಿ ಹುರಿದ ಮಾಂಸ ಎಂಬರ್ಥವಿದೆ. ಕಾಪಾಲಿಕರು ತಮ್ಮ ಜೀವನ ಸಾರ್ಥಕತೆಗೆ ಪಂಚ "ಮ" ಕಾರ ಸಿದ್ಧಿಗಳಾದ ಮತ್ಸ್ಯ, ಮಾಂಸ, ಮದ್ಯ, ಮುದ್ರಾ, ಮೈಥುನಗಳಿಗೆ ಮಹತ್ವ ನೀಡಿದರು ಎಂದು ಹೇಳಿದರು.
ಪತ್ರಕರ್ತ ಜಗನ್ನಾಥ ಶೇರಿಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸವು ನಮಗೆ ದಾರಿದೀಪವಿದ್ದಂತೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಇತಿಹಾಸವೂ ಒಳ್ಳೆ ಹಾಗೂ ಕೆಟ್ಟ ಘಟನೆಗಳ ಕಣಜವಾಗಿದೆ. ಎರಡನ್ನು ಕಟ್ಟಿಕೊಟ್ಟರೆ ಮಾತ್ರ ಪರಿಪೂರ್ಣ ಇತಿಹಾಸ ಎನಿಸಿಕೊಳ್ಳುತ್ತದೆ. ಎರಡಲ್ಲಿ ಒಂದನ್ನು ಬಿಟ್ಟರೆ ಅದು ಅಪೂರ್ಣ ಇತಿಹಾಸವಾಗುತ್ತದೆ. ಕೆಟ್ಟ ಘಟನೆಗಳು ಪಾಠ ಕಲಿಸಿದರೆ. ಒಳ್ಳೆಯ ಘಟನೆಗಳು ಜೀವನ ನಡೆಸಲು ದಾರಿ ತೋರುತ್ತವೆ ಹೀಗಾಗಿ ಇತಿಹಾಸಕಾರ ಪೂರ್ವಾಗ್ರಹ ಪೀಡಿತ ಭಾವನೆ ಹೊಂದಿರದೇ ಸೂಕ್ಷ್ಮದೃಷ್ಟಿ ಹೊಂದಿರಬೇಕು ಎಂದರು.
ಶಾಸನೋಕ್ತವಾಗಿ ಸುಲ್ಯಗ್ರಾಮ ಎಂದೇ ಕರೆಯಲಾದ ಇಂದಿನ ಸುಲೇಪೇಟಗೆ ಸುಲಗೇಮಿ, ಸುಲೇಗಾಂವ್, ಸುಲ್ಹಾಪೇಟ ಎಂಬ ಹೆಸರುಗಳು ರೂಢಿಯಲ್ಲಿದ್ದವು. ಇದೊಂದು ತಾಲ್ಲೂಕಿನ ಪ್ರಮುಖ ಪಟ್ಟಣ ವ್ಯಾವಹಾರಿಕ ಕೇಂದ್ರವಾಗಿದ್ದು ವೀರಭದ್ರೇಶ್ವರ ವೈಭವದ ಜಾತ್ರೆ ಗ್ರಾಮದ ಸಾಂಸ್ಕೃತಿಕ ಹಿರಿಮೆಯನ್ನು ಸಾರುತ್ತದೆ. ನಿಜಾಮನ ಕಾಲದಲ್ಲಿ ನಿರ್ಮಿಸಿದ ಹೊಸ ಊರಿನ ಪಗಡೆ ಬಜಾರ ಈ ಗ್ರಾಮದ ವಿಶೇಷತೆಗಳಲ್ಲೊಂದಾಗಿದೆ ಎಂದು ಹೇಳಿದರು.
ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವರಾಜ ಬಾಗಾ ಮಾತನಾಡಿ ಈ ಭಾಗದವು ವಾಣಿಜ್ಯ ಕೇಂದ್ರವಾಗಿದ್ದು ಇಲ್ಲಿ ನವಜಾತ ಶಿಶುಗಳಿಗೆ ಮುರು(ಮತ್ಸ್ಯ) ಊರುವ ಪರಂಪರೆಯಿದೆ. ವೇಷಗಾರರ ಕಾಡುಪಾಪರು ಇಲ್ಲಿ ನೆಲೆಸಿದ್ದಾರೆ. ಇಲ್ಲಿ ನಿಜಾಮನ ಕಾಲದಲ್ಲಿ ಬಟ್ಟೆಗಿರಣಿಗಳು ಹೆಚ್ಚಾಗಿದ್ದವು ಎಂದು ಹೇಳಿದರು.
ಪ್ರಾಂಶುಪಾಲ ದಶರಥ ನಾಯನೂರು ಕಾರ್ಯಕ್ರಮದ ಅಧ್ಯಕ್ಷವಹಿಸಿ ಮಾತನಾಡಿ, ಇತಿಹಾಸ ಕೆಲವೊಮ್ಮೆ ಗೊಂದಲ ಹುಟ್ಟಿಸುತ್ತದೆ. ಒಬ್ಬೊಬ್ಬ ಇತಿಹಾಸಕಾರ ಒಂದೊಂದು ರೀತಿ ವ್ಯಾಖ್ಯಾನ ಮಾಡಿದಾಗ ಯಾವುದು ನಂಬಬೇಕು ಯಾವುದು ಬಿಡಬೇಕು ಎಂಬುದರಲ್ಲಿ ತೊಳಲಾಡುವುದು ಸಹಜ ಆದರೆ ಇತಿಹಾಸ ಆಸಕ್ತ ವಿದ್ಯಾರ್ಥಿಗಳು ಯಾವುದನ್ನು ಬಿಡದೇ ಎಲ್ಲವನ್ನು ಓದಬೇಕು ಆಗ ಮಾತ್ರ ಪರಿಪೂರ್ಣ ಇತಿಹಾಸ ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಜಿಲ್ಲಾ ಸಂಯೋಜಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ , ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಸಂಘವು ಮೈಲುಗಲ್ಲು ಸ್ಥಾಪಿಸಿದೆ. ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿ ಅನಾವರಣಗೊಳಿಸಲು ಸಂಘ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ಜನಾರ್ದನ ಸ್ವಾಗತಿಸಿದರು. ರೇವತಿ ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು.

