ಡೊಂಗರಗಾಂವ ಕ್ರಾಸ್ ಬಳಿ ಭೀಕರ ಬಸ್ ಅಪಘಾತ: ಕೆಕೆಆರ್‌ಟಿಸಿ ಚಾಲಕ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ
ಡೊಂಗರಗಾಂವ ಕ್ರಾಸ್ ಬಳಿ ಭೀಕರ ಬಸ್ ಅಪಘಾತ: ಕೆಕೆಆರ್‌ಟಿಸಿ ಚಾಲಕ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ
ಕಮಲಾಪುರ, ಆ. 1: ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಬಳಿ ಶನಿವಾರ ಸಂಜೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಲಬುರಗಿಯಿಂದ ಬೀದರ್ ಕಡೆಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್‌ನ ಚಾಲಕ ತುಕಾರಾಂ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೀದರ್‌ನಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಬಸ್ ಹಾಗೂ ಕಲಬುರಗಿಯಿಂದ ಬೀದರ್ ಕಡೆಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕರ ಕ್ಯಾಬಿನ್ ನಜ್ಜುಗುಜ್ಜಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಕಲಬುರಗಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ, ಮೃತ ಚಾಲಕ ತುಕಾರಾಂ ಅವರ ನಿಧನದಿಂದ ಸಾರಿಗೆ ಇಲಾಖೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ವರದಿ ಮುರುಗೇಶ್ ಇಟಗಿ

